ಹಲ್ಲೆ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದ ಸಂಸದ

ಅನಂತಕುಮಾರ್ ಹೆಗಡೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : ವೈದ್ಯರ ಮೇಲೆ ಹಲ್ಲೆ ಮಾಡಿದ ಬಳಿಕ ಶಿರಸಿಯಲ್ಲೇ ಇಡೀ ದಿನವಿದ್ದು, ಪತ್ರಕರ್ತರು ಹಲವು ಸಲ ಸಂಪರ್ಕಿಸಿದರೂ ಉತ್ತರ ನೀಡದ ಸಂಸದ ಅನಂತಕುಮಾರ್ ಸಂಜೆ ಕೊನೆಗೂ “ಇಂದು ಪ್ರತಿಕ್ರಿಯೆ ನೀಡುವದಿಲ್ಲ” ಉತ್ತರ ನೀಡಿದರು.

ಬೆಳಿಗ್ಗೆಯಿಂದ ಟೀವಿ ಚ್ಯಾನೆಲ್ ವರದಿಗಾರರು ಸಂಸದರ ಸಂಪರ್ಕಕ್ಕೆ ಪ್ರಯತ್ನಿಸುತ್ತಲೇ ಇದ್ದರು. ಬೆಳಿಗ್ಗೆ 11ರ ಸುಮಾರಿಗೆ ಸಂಸದರ ಕಚೇರಿಗೆ ಬಂದು ಬೇರೆ ಸಭೆ ಇದೆ. ಮಧ್ಯಾಹ್ನ 4ರ ನಂತರ ಬನ್ನಿ ಎಂದು ಉತ್ತರಿಸಿ ಕಳುಹಿಸಿದರು. ಸಂಜೆ ಹೋದ ಪತ್ರಕರ್ತರು ತಾಸುಗಟ್ಟಲೆ ಕಾದರೂ ಸಂಸದರು ಮತ್ತೆ ಸಭೆಯಲ್ಲೇ ಇದ್ದರು. ಕೊನೆಗೂ ಕೆಲವರು ಅವರ ಬಳಿ ಹೋಗಿ ಕೇಳಿದಾಗ “ಇವತ್ತು ಯಾವದೇ ಪ್ರತಿಕ್ರಿಯೆ ನೀಡುವದಿಲ್ಲ” ಎಂದು ಉತ್ತರಿಸಿ ಕಳುಹಿಸಿಕೊಟ್ಟರು.

ಬಿಜೆಪಿ ವಲಯದಲ್ಲಂತೂ ಈ ಘಟನೆ ಬಗ್ಗೆ ಕೆಲವರಲ್ಲಿ ಅಸಮಾಧಾನ ಇದ್ದರೂ ಬಹಿರಂಗ ಹೇಳಿಕೆ ನೀಡದ ಧೈರ್ಯ ಯಾರೂ ಮಾಡಲಿಲ್ಲ. ಹಲವು ಕಾರ್ಯಕರ್ತರ ಬಾಯಲ್ಲಿ ಹೊಡೆದಿದ್ದು ತಪ್ಪು ಎಂಬ ಮಾತು ಕೇಳಿಬಂತು. ಸಂಸದರ ಬೆಂಬಲಿಗರು ಮಾತ್ರ ಆಸ್ಪತ್ರೆಯಲ್ಲಿ ಸಂಸದರ ಅಮ್ಮನಿಗೆ 4 ತಾಸು ಸ್ಟ್ರೆಜರ್ ಮೇಲೆ ಮಲಗಿಸಿದ್ದಾರೆ. ಚಳಿಯಿಂದ ಒದ್ದಾಡಿದರೂ ಆಸ್ಪತ್ರೆ ಸಿಬ್ಬಂದಿ ಅಲಕ್ಷಿಸಿದ್ದಾರೆ. ಯಾರೇ ವ್ಯಕ್ತಿ ತನ್ನ ತಾಯಿ ಆದ ತೊಂದರೆ ಸಹಿಸಿಕೊಳ್ಳುವದಿಲ್ಲ. ಅದನ್ನೇ ಸಂಸದರು ಮಾಡಿದ್ದಾರೆಂದು ಅವರ ಬೆಂಬಲಿಗರು ಸಮರ್ಥನೆ ಮಾಡಿಕೊಂಡರು.