ತನಿಖೆಗೆ ಆದೇಶಿಸಿದ ರಾಜ್ಯ ಮಾನವ ಹಕ್ಕು ಆಯೋಗ

ಬೆಂಗಳೂರು : ಶಿರಸಿಯ ಆಸ್ಪತ್ರೆಯ ವೈದ್ಯರ ಮೇಲೆ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ  ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಜಿಲ್ಲೆಯ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ ನಂತರ ರಾಜ್ಯ ಮಾನವ ಹಕ್ಕು ಆಯೋಗವೂ ಇಂತಹುದೇ ಕ್ರಮ ಕೈಗೊಂಡಿದೆಯಲ್ಲದೆ, ಘಟನೆಯ ತನಿಖೆಯನ್ನು ಡಿವೈಎಸ್ಪಿ ಅಥವಾ ಅದರ ಮೇಲಿನ ಶ್ರೇಣಿಯ ಅಧಿಕಾರಿಯಿಂದ  ತನಿಖೆ ನಡೆಸುವಂತೆ ಆದೇಶಿಸಿದೆ. ಸಂಸದ ತನಿಖಾಧಿಕಾರಿ ಮೇಲೆ ಪ್ರಭಾವ ಬೀರುವ  ಸಾಧ್ಯತೆಯಿರುವುದರಿಂದ ತನಿಖೆಯನ್ನು ಜಿಲ್ಲೆಯ ಹೊರಗಿನ ಅಧಿಕಾರಿ ಮೂಲಕವೇ ತನಿಖೆ ನಡೆಸುವಂತೆ ಆಯೋಗ ಸ್ಪಷ್ಟವಾಗಿ ತಿಳಿಸಿದೆ.

ಸದ್ಯ ತನಿಖೆ ನಡೆಸುತ್ತಿರುವ ಸ್ಥಳೀಯ ಪೊಲೀಸರ ಮೇಲೆ ಸಂಸದ ತನ್ನ ಪ್ರಭಾವ ಬೀರಬಹುದಾದುದರಿಂದ  ಅವರ ತನಿಖೆ ಮುಂದುವರಿದಿರುವಂತೆಯೇ ತಾನು ಆದೇಶಿಸಿದ ರೀತಿಯಲ್ಲಿ ತನಿಖೆ ನಡೆಸಬೇಕೆಂದು ಆಯೋಗ ತಿಳಿಸಿದೆ ಎಂದು ಅದರ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಮ್ಮ ತಾಯಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿ ಶಿರಸಿಯ ಟಿಎಸ್ಸೆಸ್ ಆಸ್ಪತ್ರೆಯ ಇಬ್ಬರು  ವೈದ್ಯರು ಹಾಗೂ ಇನ್ನೊಬ್ಬ ಸಿಬ್ಬಂದಿ ಮೇಲೆ ಸಂಸದ ಹಲ್ಲೆ ನಡೆಸುತ್ತಿರುವ ದೃಶ್ಯ ಸೀಸಿಟೀವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು ಈ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹಲ್ಲೆ ಘಟನೆಯ ವೀಡಿಯೊ ವೈರಲ್ ಆಗಿತ್ತಲ್ಲದೆ ವೈದ್ಯರಿಂದ ಹಾಗೂ ರಾಜಕೀಯ ಪಕ್ಷಗಳಿಂದ ಪ್ರತಿಭಟನೆಗಳೂ ನಡೆದಿದ್ದವು.

ಘಟನೆಯ ನಂತರ ಸಂಸದ ಆಸ್ಪತ್ರೆಯ ಆಡಳಿತದೊಂದಿಗೆ ಸಂಧಾನ ನಡೆಸಿ ಕ್ಷಮೆ ಕೂಡ ಯಾಚಿಸಿದ್ದರೆನ್ನಲಾಗಿದ್ದು ಈ ನಡುವೆ  ಯಾರೂ ಕೂಡ ದೂರು ದಾಖಲಿಸಲು ಮುಂದೆ ಬರದ ಕಾರಣ ಹಾಗೂ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹಾಗೂ ರಾಜ್ಯಾದ್ಯಂತ ಭಾರೀ ಆಕ್ರೋಶ ಮೂಡಿಸಿದ ಕಾರಣ ಗುರುವಾರ ಪೊಲೀಸರೇ ಗೃಹ ಮಂತ್ರಿ ಸೂಚನೆ ಮೇರೆಗೆ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿದ್ದರು.