ಸಂಸದ ಅನಂತ ಹೆಗಡೆಗೆ ಜಾಮೀನು

ಶಿರಸಿ ವೈದ್ಯರಿಗೆ ಹಲ್ಲೆ ಪ್ರಕರಣ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿಯ ಟಿ ಎಸ್ ಎಸ್ ವೈದ್ಯರಿಗೆ ಹಲ್ಲೆ ಮಾಡಿ ನಾಪತ್ತೆಯಾಗಿದ್ದ ಸಂಸದ ಅನಂತ ಹೆಗಡೆ, ಬಿಜೆಪಿ ಮುಖಂಡ ಕೃಷ್ಣ ಎಸಳೆಗೆ ಗುರುವಾರ ಸಂಜೆ ಶಿರಸಿಯ ಜಿಲ್ಲಾ ಹೆಚ್ಚುವರಿ ನ್ಯಾಯಾಲಂiÀiದಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಎಫ್ ಐ ಆರ್ ಆಗಿ ಎರಡು ವಾರಗಳ ಕಾಲ ಪೊಲೀಸರು ಸಂಸದರ ಪತ್ತೆ ವಿಳಂಬ ಮಾಡಿರುವದರಿಂದ ಅಂತಿಮವಾಗಿ ಇದೀಗ ಅವರು ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಯಶಸ್ವಿಯಾದರು.

ಜನವರಿ 2ರಂದು ಸಂಸದರ ತಾಯಿಯನ್ನು ಟಿ ಎಸ್ ಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಾಗ ಅಲ್ಲಿ ಸಮರ್ಪಕ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಸಂಸದ ಅನಂತ ಹೆಗಡೆ ರಾತ್ರಿ ವೈದ್ಯರಾದ ಮಧುಕೇಶ್ವರ, ಬಾಲಚಂದ್ರ ಭಟ್ಟ, ಸಿಬ್ಬಂದಿ ರಾಹುಲ ಮೇಲೆ ಹಲ್ಲೆ ನಡೆಸಿದ್ದರು. ನಂತರ ರಾಜಿಯಾದರೂ ಮರುದಿನ ಟೀವಿಯಲ್ಲಿ, ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾದ್ದರಿಂದ ರಾಜ್ಯ ಐಎಂಎ ಒತ್ತಡಕ್ಕೆ ಗೃಹಮಂತ್ರಿ ಜನವರಿ 5ರ ರಾತ್ರಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಸೂಚಿಸಿದಂತೆ 4 ದಿನದ ನಂತರ ಪ್ರಕರಣ ದಾಖಲಾಯಿತು.

ಸಂಸದರು ಒಂದೆಡೆ ತಮ್ಮ ನ್ಯಾಯವಾದಿಗಳ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಪೊಲೀಸರು ಮಾತ್ರ ಹುಡುಕಾಟದ ಗಂಭೀರ ಪ್ರಯತ್ನ ಮಾಡಿಲ್ಲ ಎಂಬ ಆರೋಪ ಜನರದ್ದಾಗಿತ್ತು. ವಿವಿಧ ಸಂಘಟನೆಗಳು ಸಂಸದರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ಸಹ ನಡೆಸಿದ್ದವು. ಪ್ರಕರಣ ದಾಖಲಿಸಿಕೊಂಡು ಎರಡು ವಾರ ಕಳೆದರೂ ಪೊಲೀಸರು ಸಂಸದರ ಬಂಧನ ಮಾಡಲೇ ಇಲ್ಲ.

ಹೋದ ವಾರವೇ ಸಂಸದರ ಪರ ಅರ್ಜಿ ಕೋರ್ಟಿಗೆ ಬಂದರೂ ನಿರೀಕ್ಷಣಾ ಜಾಮೀನು ಸಿಕ್ಕಿರಲಿಲ್ಲ. ಅಂತೂ ಗುರುವಾರ ಮತ್ತೆ ಈ ವಿಷಯ ವಿಚಾರಣೆಗೆ ಬಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಸಂಜೆ ನಿರೀಕ್ಷಣಾ ಜಾಮೀನಿಗೆ ಆದೇಶ ಮಾಡಿದ್ದಾರೆ. ಆದೇಶ ಪ್ರತಿ ಬಂದ ಒಂದೆರಡು ದಿನಗಳಲ್ಲಿ ಸಂಸದರು ಶಿರಸಿಗೆ ಬರುವ ಸಾಧ್ಯತೆ ಇದೆ. ಇನ್ನು ಎರಡು ವಾರದೊಳಗೆ ಶಿರಸಿ ಜೆ ಎಂ ಎಫ್ ಸಿ ಕೋರ್ಟಿನಲ್ಲಿ ಖಾಯಂ ಜಾಮೀನು ಆದೇಶವನ್ನು ಸಂಸದರು ಪಡೆಯಬೇಕಾಗುತ್ತದೆ.