ಶಿರಸಿ ಆಸ್ಪತ್ರೆ ವೈದ್ಯರಿಗೆ ಸಂಸದ ಅನಂತ ಹಲ್ಲೆ

ತಾಯಿಯ ಕಾಲುನೋವು ಚಿಕಿತ್ಸೆಗೆ ಗಮನ ಕೊಡಲಿಲ್ಲ ಎನ್ನುವ ನೆಪ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿಯ ಟಿಎಸ್ಸೆಸ್ ಆಸ್ಪತ್ರೆಗೆ ಕಾಲು ನೋವಿನಿಂದ ಚಿಕಿತ್ಸೆಗೆ ಬಂದ ಸಂಸದರ ತಾಯಿಗೆ ಸಮರ್ಪಕ ರೀತಿ ಸ್ಪಂದನೆ ತೋರಿಲ್ಲ ಎಂದು ಕೋಪಗೊಂಡು ಸಂಸದ ಅನಂತ ಹೆಗಡೆ ಹಾಗೂ ಇತರರು ಸೋಮವಾರ ಮಧ್ಯರಾತ್ರಿ ಆಸ್ಪತ್ರೆಗೆ ಆಗಮಿಸಿ ವೈದ್ಯರಿಬ್ಬರಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ರಾತ್ರಿ ಸಂಸದರ ತಾಯಿಯು ಕಾಲು ನೋವಿನ ಸಂಬಂಧ ಚಿಕಿತ್ಸೆಗೆ ಬಂದಿದ್ದು, ಎಲುಬು ತಜ್ಞ ಡಾ ಮಧುಕೇಶ್ವರ ಆಪರೇಶನ್ ಥಿಯೇಟರಿನಲ್ಲಿದ್ದರು. ಎಕ್ಸರೇಯಲ್ಲಿ ಮೂಳೆ ಮುರಿತ ಆಗಿರುವದು ಕಂಡುಬಂದಿದೆ. ಸಂಸದರ ಗಮನಕ್ಕೆ ಈ ವಿಷಯ ಹೋಗಿದೆ. ಅವರು ಮುಂದೆ ಬೇರೆ ತಜ್ಞರ ಜತೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದರಂತೆ.

ಮಧ್ಯರಾತ್ರಿ ಸಂಸದ ಅನಂತ ಹೆಗಡೆ ಆಸ್ಪತ್ರೆಗೆ ಬಂದಾಗ ತಾಯಿಯನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸದೇ ಸ್ಟ್ರೆಚರ್ ಮೇಲೆ ಇಟ್ಟಿರುವದನ್ನು ಕಂಡರು. “ಕನಿಷ್ಟ ಚಾದರ ಸಹ ನೀಡದೇ ಅಲಕ್ಷಿಸಿದ್ದಾರೆ. ತಾಯಿ ಬಗ್ಗೆ ಅಲಕ್ಷ ತೋರಿದ್ದಾರೆ” ಎಂದು ಅಸಮಾಧಾನಗೊಂಡು ವೈದ್ಯರಾದ ಡಾ ಮಧುಕೇಶ್ವರ, ಡಾ ಬಾಲು ಭಟ್ಟ ಹಾಗೂ ತಪ್ಪಿಸಲು ಬಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆಂದು ಗೊತ್ತಾಗಿದೆ.

ವಿಷಯ ತಿಳಿದು ಶಿರಸಿಯ ಪ್ರಮುಖ ವೈದ್ಯರು ಆಸ್ಪತ್ರೆಗೆ ತೆರಳಿದ್ದು, ಪೆಟ್ಟು ತಿಂದ ವೈದ್ಯರನ್ನು ಸರ್ಕಾರಿ ಆಸ್ಪತ್ರೆಗೆ ತಂದು ಪ್ರಾಥಮಿಕ ಚಿಕಿತ್ಸೆ ಸಹ ನೀಡಲಾಗಿದೆ. ಮಂಗಳವಾರ ಬೆಳಗಿನ ಜಾವ 3ರಿಂದ 4 ನಡುವೆ ವೈದ್ಯರು ಸೇರಿ ಸಭೆ ನಡೆಸುವಾಗ ಸಂಸದರು ಆಗಮಿಸಿದ್ದು, ಘಟನೆ ಬಗ್ಗೆ ತಮ್ಮ ವಿಷಾದ ಹೇಳಿಹೋಗಿದ್ದಾರೆಂದು ಗೊತ್ತಾಗಿದೆ.