`ಜ 28ರ ಒಳಗೆ ಕಂಬಳಕ್ಕೆ ಅನುಮತಿ ಸಿಗದಿದ್ದಲ್ಲಿ ಜಿಲ್ಲೆಯಲ್ಲಿ ಚಳವಳಿ ಆರಂಭ’

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : “ಕರಾವಳಿಯ ಜನಪದ ಕ್ರೀಡೆಯಾಗಿರುವ ಕಂಬಳ ನಡೆಸಲು ಅನುಮತಿ ಸಿಗದಿದ್ದಲ್ಲಿ ಜ 28ರ ಬಳಿಕ `ಆವೇಶ ಚಳವಳಿ’ ಆರಂಭಿಸಲಾಗುವುದು” ಎಂದು ಜಿಲ್ಲಾ ಕಂಬಳ ಸಮಿತಿ ಸದಸ್ಯ ಮುರಳೀಧರ ರೈ ಮಠಂತಬೆಟ್ಟು ತಿಳಿಸಿದರು.

ಮಾಧ್ಯಮದ ಜೊತೆ ಮಾತನಾಡಿದ ಅವರು, “ಜಲ್ಲಿಕಟ್ಟು ಕ್ರೀಡೆಗೆ ಅಲ್ಲಿನ ಜನರ ಹೋರಾಟದ ಫಲವಾಗಿ ವಿಶೇಷ ಕಾನೂನು ತಿದ್ದುಪಡಿಗೊಳಿಸಿ ಅವಕಾಶ ನೀಡಲಾಗಿದೆ. ಆದರೆ ಜಲ್ಲಿಕಟ್ಟು ಕ್ರೀಡೆಯಲ್ಲಿ ಆಗಿರುವಂತೆ ಯಾವುದೇ ಅಪಾಯಗಳು ಕಂಬಳದಿಂದ ನಡೆದಿರುವುದಿಲ್ಲ. ಆದರೂ ಕೆಲ ಹುನ್ನಾರಗಳ ಕಾರಣಗಳಿಂದ ಕಂಬಳಕ್ಕೆ ಅನುಮತಿ ನಿಷೇಧಿಸಲಾಗಿದೆ. ಗದ್ದೆಯಲ್ಲಿ ಆರಂಭಗೊಂಡು ಇದೀಗ ಗೌರವದ ಸ್ಥಾನದಲ್ಲಿ ನಡೆಯುತ್ತಿರುವ ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ತುಳುನಾಡಿನ ಜನರ ಮತ್ತು ರೈತರ ಆರಾಧನೆಯ ಪ್ರತೀಕವಾಗಿ ನಡೆಯುತ್ತಿರುವ ಕಂಬಳ ಕ್ರೀಡೆಗೆ ಸರ್ಕಾರವೂ ಪ್ರೋತ್ಸಾಹ ನೀಡಿದೆ. ಹಿಂದೆ ಮೂಡುಬಿದಿರೆಯಲ್ಲಿ ನಡೆದ ಕಂಬಳಕ್ಕೆ ಸರ್ಕಾರ ಸಹಾಯಧನ ದೊರಕಿತ್ತು. ಇದೀಗ ಕಂಬಳದಲ್ಲಿ ಓಡಿಸುವ ಕೋಣಗಳಿಗೆ ಯಾವುದೇ ರೀತಿಯ ಹಿಂಸೆಯನ್ನು ನೀಡಲಾಗುತ್ತಿಲ್ಲ. ಸರ್ಕಾರದ ಮಾನದಂಡದಂತೆ ಕಂಬಳ ನಡೆಯುತ್ತಿದೆ. ಇದನ್ನು ಪರಿಶೀಲನೆ ನಡೆಸಲು ತಾಲೂಕು ದಂಡಾಧಿಕಾರಿಗಳು ಕಂಬಳ ನಡೆಯುತ್ತಿರುವ ಸ್ಥಳಗಳಿಗೆ ಬರುತ್ತಾರೆ. ಜಿಲ್ಲೆಯಲ್ಲಿ 107 ಅಧಿಕೃತ ಕಂಬಳಗಳು ನಡೆಯುತ್ತಿದೆ” ಎಂದ ಅವರು, “ಈ ಎಲ್ಲಾ ವಿಚಾರವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಲಾಗುವುದು” ಎಂದರು.