ವಿದ್ಯುತ್ ದರ ಏರಿಕೆಗೆ ಭಾರೀ ವಿರೋಧ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ದಿನಬಳಕೆ ವಸ್ತುಗಳ ಬೆಲೆ ಏರಿಕೆಗಳಿಂದ ತತ್ತರಿಸಿ ಹೋಗುತ್ತಿರುವ ಜನಸಾಮಾನ್ಯರಿಗೆ ಇದೀಗ ವಿದ್ಯುತ್ ಇಲಾಖೆ ಕೂಡಾ ಗದಾಪ್ರಹಾರ ಮಾಡಲು ಹೊರಟಿದೆ. ತನ್ನ ಕಂದಾಯ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಬೆಲೆ ಏರಿಸಿಬೇಕಾಗಿದೆ ಎನ್ನುತ್ತಾ ಮೆಸ್ಕಾಂ ಇದೀಗ ನಾವು ಬಳಸುವ ವಿದ್ಯುತ್ ಯುನಿಟ್ ದರವನ್ನು ಏಕಾಏಕಿ 1.50 ರೂಪಾಯಿನಷ್ಟು ಹೆಚ್ಚಿಸಲು ಮುಂದಾಗಿದೆ. ವಿದ್ಯುತ್ ಬಳಕೆದಾರರೆಲ್ಲರೂ ಆಕ್ಷೇಪ ಸಲ್ಲಿಸುವ ಮೂಲಕ ಪ್ರತಿಭಟಿಸಿ ಈ ಬೆಲೆ ಏರಿಕೆ ತಡೆಗಟ್ಟಲು ಮುಂದಾಗಬೇಕಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘ ತಿಳಿಸಿದೆ.

ರಾಜ್ಯದ ಇತರ ಎಸ್ಕಾಂ ಗಳಿಗೆ ಹೋಲಿಸಿದರೆ, ಮೆಸ್ಕಾಂ ಲಾಭದಲ್ಲಿದೆ. ಬೃಹತ್ ಕೈಗಾರಿಕೆಗಳು ಸೇರಿದಂತೆ ಎಲ್ಲರಲ್ಲೂ  ಸಮರ್ಪಕವಾದ ಮತ್ತು ನಿಗದಿತ ಮಿತಿಯೊಳಗೆ ಕಟ್ಟು ನಿಟ್ಟಿನಲ್ಲಿ ವಿದ್ಯುತ್ ಬಿಲ್ ವಸೂಲಿ ಮಾಡುವ ಕ್ರಮಕೈಗೊಳ್ಳಲಿ. ಅಗತ್ಯವಿರುವ ವಿದ್ಯುತ್ ಖರೀದಿಯಲ್ಲೂ ರಾಜಕೀಯ ಮತ್ತು ಭ್ರಷ್ಟತೆಯನ್ನು ತೊಡೆದು ಹಾಕಲು ಸರಕಾರ ಹಾಗೂ ಇಂಧನ ಇಲಾಖೆ ಪ್ರಯತ್ನ ಪಡಲಿ. ಆಗ ರಾಜ್ಯದಲ್ಲಿ ವಿದ್ಯುತ್ ಇಲಾಖೆಗೆ ನಷ್ಟವಾಗುವ ಮಾತೇ ಇಲ್ಲ. ಇದೆಲ್ಲಬಿಟ್ಟು  ಸುಲಭದಲ್ಲಿ ಬಲಿಯಾಗುವ ವಿದ್ಯುತ್ ಬಳಕೆದಾರರನ್ನು ವಿದ್ಯುತ್ ಬೆಲೆ ಏರಿಸಿ ಸುಲಿಯುವ ಕ್ರಮಗಳಿಂದ ಇಲಾಖೆ ತನ್ನ ನಷ್ಟ ತುಂಬಿಕೊಳ್ಳಲು ಹೊರಡುತ್ತಿದೆ. ರಾಜಕೀಯ ಪಕ್ಷಗಳಂತೆ ರಸ್ತೆಗಳಲ್ಲಿ ಲೆಕ್ಕ ಭರ್ತಿಗೆ ಮಾತ್ರ ಪ್ರತಿಭಟನೆ ಮಾಡಲು ಹೋಗದೆ, ಈ ವಿದ್ಯುತ್ ದರ ಏರಿಕೆ ವಿರುದ್ಧ ಬಳಕೆದಾರರೆಲ್ಲರೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಆಕ್ಷೇಪ ಸಲ್ಲಿಸುವ ಮೂಲಕ ಪ್ರತಿಭಟನೆ ಮಾಡುವಂತೆ ಉಡುಪಿ ಜಿಲ್ಲಾ ಕೃಷಿಕ ಸಂಘವು ಮನವಿ ಮಾಡಿದೆ.

ವಿದ್ಯುತ್ ಬಳಕೆದಾರರು ಪತ್ರಿಕೆಗಳಲ್ಲಿ ಪ್ರಕಟವಾದ ಕ್ರಮದಂತೆ ತಮ್ಮ ಆಕ್ಷೇಪವನ್ನು ನೇರವಾಗಿ ಕನಾರ್ಟಕ ವಿದ್ಯುಚ್ಛಕ್ತಿ ಆಯೋಗಕ್ಕೆ ಸಲ್ಲಿಸಬಹುದು. ಇದಲ್ಲದೆ ಉಡುಪಿ ಜಿಲ್ಲಾ ಕೃಷಿಕ ಸಂಘವು ಸಿದ್ಧಪಡಿಸಿರುವ ಆಕ್ಷೇಪ ಪತ್ರಗಳನ್ನು ಬಳಸಿಕೊಂಡು ಕೂಡ ಸುಲಭವಾಗಿ ಆಕ್ಷೇಪ ಸಲ್ಲಿಸಬಹುದು. ಆಕ್ಷೇಪ ಪತ್ರಗಳಿಗಾಗಿ 2017, ಜನವರಿ 28ರೊಳಗೆ ಗ್ರಾಮಗಳಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯಕರ್ತರುಗಳನ್ನು ಅಥವಾ ಉಡುಪಿ ನಗರದ ಅಲಂಕಾರ್ ಥಿಯೇಟರ್ ಹಿಂಬದಿ ಗುರುಪ್ರಸಾದ್ ಕಟ್ಟಡದಲ್ಲಿರುವ ಸಂಘದ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ತಿಳಿಸಿದ್ದಾರೆ.