ಬೇಡ್ತಿ ಸೇತುವೆ ಬಳಿ ಗುಡ್ಡ ಕುಸಿತ : ಅಪಾಯದ ಭೀತಿನಮ್ಮ ಪ್ರತಿನಿಧಿ ವರದಿ

ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಬೇಡ್ತಿ ಸೇತುವೆ ಬಳಿ ಗುಡ್ಡ ಕುಸಿತ

 

ಯಲ್ಲಾಪುರ : ಇಲ್ಲಿನ ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಬೇಡ್ತಿ ಸೇತುವೆ ಬಳಿ ಗುಡ್ಡ ಕುಸಿದಿದ್ದು, ರಸ್ತೆಯೂ ಕುಸಿಯುವ ಭೀತಿ ಉಂಟಾಗಿದೆ. ರಸ್ತೆಯವರೆಗೆ ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತಗೊಂಡರೆ ಯಲ್ಲಾಪುರ ಹಾಗೂ ಶಿರಸಿ ತಾಲೂಕುಗಳ ನಡುವಿನ ಸಂಪರ್ಕಕ್ಕೆ ತೊಂದರೆ ಉಂಟಾಗಲಿದೆ.

ಹಳೆ ಸೇತುವೆಯ ಪಕ್ಕದಲ್ಲಿ ನೂತನ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಅದಕ್ಕಾಗಿ ಗುಡ್ಡದ ಕೆಲ ಭಾಗವನ್ನು ಅಗೆಯಲಾಗಿದೆ. ಮಳೆಯಿಂದಾಗಿ ಗುಡ್ಡದ ಮತ್ತಷ್ಟು ಭಾಗ ಕುಸಿದಿದ್ದು, ಜೋರಾದ ಮಳೆ ಮುಂದುವರಿದರೆ ರಸ್ತೆಯೂ ಕುಸಿಯುವ ಅಪಾಯವಿದೆ. ಗುಡ್ಡ ಕುಸಿದಿರುವುದರಿಂದ ಸೇತುವೆ ಕಾಮಗಾರಿಗಾಗಿ ನಿರ್ಮಿಸಲಾಗುತ್ತಿರುವ ಸ್ಥಂಭಕ್ಕೂ ಹಾನಿ ಉಂಟಾಗಿದೆ. ಸೇತುವೆ ಬಳಿ ಗುಡ್ಡ ಕುಸಿದಿದ್ದು, ಅಪಾಯ ಇರುವ ಕುರಿತು ಫಲಕ ಅಳವಡಿಸಲಾಗಿದೆ. ರಸ್ತೆಯ ಅರ್ಧಭಾಗದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಮೂಲಕ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ.