ತಾಯಿ, ಮಗ ವಿಷ ಸೇವಿಸಿ ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ವಿಷ ಸೇವಿಸಿ ತಾಯಿ-ಮಗ ದಾರುಣ ಅಂತ್ಯ ಕಂಡ ಘಟನೆ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ಬಳಿಯ ಬೊಳ್ಳಾವುನಲ್ಲಿ ನಡೆದಿದೆ. ಬೊಳ್ಳಾವು ನಿವಾಸಿ ರಾಮಚಂದ್ರ (38) ಹಾಗೂ ಅವರ ತಾಯಿ ಸೇಸಮ್ಮ (67) ಮೃತ ದುರ್ದೈವಿಗಳು.

ಪತ್ನಿಯ ನಡತೆ ಬಗ್ಗೆ ನೊಂದು ದಿ ತಿಮ್ಮಪ್ಪ ಗೌಡ ಎಂಬವರ ಪುತ್ರ ರಾಮಚಂದ್ರ ಎಂಬಾತ ಬುಧವಾರ ಮನೆಯ ಶೆಡ್ಡಿನಲ್ಲಿ ವಿಷ ಸೇವಿಸಿದ್ದು, ತೀವ್ರ ಅಸ್ವಸ್ಥರಾಗಿ ಬಿದ್ದಿದ್ದ ಇವರನ್ನು ಸ್ಥಳೀಯರ ನೆರವಿನಿಂದ ಮನೆಯವರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈತ ರಾತ್ರಿ ಸುಮಾರು 10:30ರ ಸುಮಾರಿಗೆ ಮೃತಪಟ್ಟಿದ್ದಾರೆ. ಅಷ್ಟರವರೆಗೆ ಆಸ್ಪತ್ರೆಯಲ್ಲಿದ್ದ ಆತನ ತಾಯಿ ಸೇಸಮ್ಮ ಬಳಿಕ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿ, “ಕೆಲಸದ ವಿಷಯದಲ್ಲಿ ಮನೆಯಲ್ಲಿ ಪತಿ ಹಾಗೂ ಪತ್ನಿ ನಡುವೆ ದಿನಾ ಜಗಳವಾಗುತ್ತಿತ್ತು. ಇದರಿಂದ ಮನನೊಂದು ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಹೇಳಿಕೆ ನೀಡಿದ್ದರು. ಬಳಿಕ ಬೊಳ್ಳಾವಿನ ಮನೆಗೆ ಆಗಮಿಸಿದ ಇವರು ಗುರುವಾರ ಬೆಳಗ್ಗೆ ಮನೆಯಲ್ಲಿ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ಮನೆಯಲ್ಲಿ ಅಸ್ವಸ್ಥರಾಗಿರುವುದನ್ನು ಕಂಡ ಅವರ ಸೊಸೆ ಹಾಗೂ ಸ್ಥಳೀಯರು ಕೂಡಲೇ ಸೇಸಮ್ಮರನ್ನು ಆಸ್ಪತ್ರೆಗೆ ಸಾಗಿಸಿದ್ದು, ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ಈ ಬಗ್ಗೆ ಸೇಸಮ್ಮರ ಸೊಸೆ ವಸಂತಿ “ಮಗನ ಸಾವಿನಿಂದ ನೊಂದು ಅತ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರ ಮೃತದೇಹಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಿಕರಿಗೆ ಹಸ್ತಾಂತರಿಸಲಾಯಿತು.

ಮೃತ ರಾಮಚಂದ್ರ ಗ್ರಾಮಾಭಿವೃದ್ಧಿ ಸಂಸ್ಥೆಯೊಂದರಲ್ಲಿ ಗ್ರಾಮ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಪತ್ನಿ ವಸಂತಿ, ಪುತ್ರಿಯರಾದ ಮೂರನೇ ತರಗತಿಯ ಹರ್ಷಿತಾ, ಒಂದನೇ ತರಗತಿಯ ಪ್ರತೀಕ್ಷಾ ಹಾಗೂ ಒಂದು ವರ್ಷ ಒಂಬತ್ತು ತಿಂಗಳಿನ ಮಗು ಅಮೂಲ್ಯರನ್ನು ಅಗಲಿದ್ದಾರೆ. ಸೇಸಮ್ಮರಿಗೆ ರಾಮಚಂದ್ರ ಏಕೈಕ ಪುತ್ರನಾಗಿದ್ದು, ಉಳಿದ ಇಬ್ಬರು ಪುತ್ರಿಯರು. ಅವರನ್ನು ಮದುವೆ ಮಾಡಿಕೊಡಲಾಗಿದೆ.