ರೂ 1 ಲಕ್ಷಕ್ಕೆ 3 ದಿನದ ಹೆಣ್ಣು ಮಗುವನ್ನು ಮಾರಿದ ತಾಯಿ

ನಮ್ಮಪ್ರತಿನಿಧಿ ವರದಿ

ಕುಂದಾಪುರ : ಹೆರಿಗೆಯಾಗಿ ಮೂರೇ ದಿನದಲ್ಲಿ ಹೆಣ್ಣು ಮಗುವನ್ನು ಮಾರಾಟ ಮಾಡಿದ ಪ್ರಕರಣವೊಂದು ಕುಂದಾಪುರ ತಾಲೂಕಿನ ಬೈಂದೂರಿನ ಪಡುವರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಂಬೆ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ದೊಂಬೆ ನಿವಾಸಿ ನಾಗಮ್ಮ ಪೂಜಾರಿ ಹಾಗೂ ಶೇಖರ ಪೂಜಾರಿ ಮಗುವನ್ನು ಮಾರಾಟ ಮಾಡಿದ ಆರೋಪಿಗಳು. ಶಿರೂರು ಸಮೀಪದ ಹೆಬ್ಳೆ ಗ್ರಾಮದ ಶ್ರೀಧರ ಮೊಗೇರ ದಂಪತಿ ಮಗು ಖರೀದಿಸಿದವರು ಎನ್ನಲಾಗಿದೆ.

ಮಗು ಮಾರಾಟ ಮಾಡಿದ ಬಗ್ಗೆ ಸ್ಥಳೀಯರು ಉಡುಪಿ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದು, ದೂರು ಆಧರಿಸಿ ತನಿಖೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ತನಿಖೆಯ ಆರಂಭದಲ್ಲಿಯೇ ಮಗುವಿನ ತಾಯಿ ಮಗುವನ್ನು ಮಾರಾಟ ಮಾಡಿದ್ದನ್ನು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದ್ದು, ಮಗುವನ್ನು ಖರೀದಿಸಿದವರಿಗೆ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸುವಂತೆ ಸೂಚಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ನಾಗಮ್ಮ ಪೂಜಾರಿ ಹಾಗೂ ಶೇಖರ ಪೂಜಾರಿ ದಂಪತಿ ಕಡು ಬಡತನದಲ್ಲಿ ಇದ್ದು, ಶೇಖರ ಪೂಜಾರಿ ಬೆಂಗಳೂರಿನ ಹೋಟೆಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅವರಿಗೆ ಈ ಹಿಂದೆ ನಾಲ್ಕು ಜನ ಮಕ್ಕಳಿದ್ದು, ಕೊನೆಯ ಮಗ ತೀರಿಹೋಗಿದ್ದ. ಮತ್ತೆ ಗರ್ಭಿಣಿಯಾಗಿದ್ದ ನಾಗಮ್ಮ ಪೂಜಾರಿ ಡಿಸೆಂಬರ್ 23ರಂದು ಹೆಣ್ಣು ಮಗುವಿಗೆ ಜನ್ಮನೀಡಿದ್ದರು. ಡಿಸೆಂಬರ್ 26ರಂದು ಮಗುವನ್ನು ಸಾಕಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಭಟ್ಕಳ ತಾಲೂಕಿನ ಶಿರೂರು ಸಮೀಪದ ಹೆಬ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀಧರ ಮೊಗೇರ ಎಂಬವರಿಗೆ ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಒಂದು ಲಕ್ಷ ರೂಪಾಯಿಗೆ ಮಗು ಮಾರಾಟ ಮಾಡಲಾಗಿದೆ ಎನ್ನುವ ಮಾತುಗಳೂ ಇದೀಗ ಕೇಳಿ ಬರುತ್ತಿದೆ. ಅಲ್ಲದೇ ಮಗು ಖರೀದಿಸಿದ ವ್ಯಕ್ತಿ ಶ್ರೀಧರ ಮೊಗವೀರ ಭಟ್ಕಳದ ಬ್ಯಾಂಕೊಂದರಲ್ಲಿ ಉದ್ಯೋಗಿ ಎನ್ನಲಾಗಿದೆ.