ಕೈಯಲ್ಲಿ ಮೂರು ತಿಂಗಳ ಮಗು ಹೊತ್ತು ಪೀಜಿ ಡಿಗ್ರಿ ಪಡೆದ ವಿದೇಶಿ ವಿದ್ಯಾರ್ಥಿನಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೈಯಲ್ಲಿ ಮೂರು ತಿಂಗಳ ಮಗುವನ್ನು ಹೊತ್ತುಕೊಂಡಿದ್ದ ಬುರುಂಡಿ ವಿದ್ಯಾರ್ಥಿನಿ ಮುಗೀಶ ಎನ್ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎರಡು ವರ್ಷದ ಇಲೆಕ್ಟ್ರಾನಿಕ್ಸ್ ಕೋರ್ಸಿನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ.

ವಿಶ್ವವಿದ್ಯಾನಿಲಯ ಕ್ಯಾಂಪಸ್ಸಿನಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮೊದಲ ಪದವಿ ಪ್ರದಾನ ದಿನದಂದು ಸ್ನಾತಕೋತ್ತರ ಪದವಿ ಸ್ವೀಕರಿಸಿದ 22 ವಿದೇಶಿ ವಿದ್ಯಾರ್ಥಿಗಳಲ್ಲಿ ಈಕೆಯೂ ಒಬ್ಬರು.

ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚುರಲ್ ರಿಲೇಷನ್ಸ್ (ಐಸಿಸಿಆರ್) ಒದಗಿಸಿದ ಸ್ಕಾಲರ್ ಶಿಪ್ಪಿನಲ್ಲಿ ಆಕೆ ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾನಿಲಯಕ್ಕೆ ಸೇರಿದ್ದರು. ಪದವಿ ಪ್ರಮಾಣ ಪತ್ರ ಸ್ವೀಕರಿಸಲು 33 ವಿದ್ಯಾರ್ಥಿಗಳು ಅರ್ಹತೆ ಹೊಂದಿದ್ದರೂ 22 ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಗೀಶರು ಪ್ರಾಜೆಕ್ಟ್ ವರ್ಕ್ ಸಂದರ್ಭ ಮಗುವಿಗೆ ಜನ್ಮ ನೀಡಿದ್ದರು.

ಶನಿವಾರ ಅವರು ವಿ ವಿ ಉಪಕುಲಪತಿ ಕೆ ಬೈರಪ್ಪ ಮತ್ತು ಬೆಂಗಳೂರು ಐಸಿಸಿಆರ್ ಪ್ರಾದೇಶಿಕ ನಿರ್ದೇಶಕ ಆರ್ ವೇಣುಗೋಪಾಲ್ ಅವರಿಂದ ಪ್ರಮಾಣಪತ್ರ ಸ್ವೀಕರಿಸಲು ವೇದಿಕೆಗೆ ತೆರಳುವಾಗ ಪುಟ್ಟ ಮಗುವನ್ನು ಕೈಯಲ್ಲಿ ಹಿಡಿದಿದ್ದರು. ಮುಗೀಶ್ ಪತಿ ಫಿಸಿಯೋಥೆರಪಿಸ್ಟ್.  ಇನ್ನೊಬ್ಬ ವಿದ್ಯಾರ್ಥಿನಿ ಅಫ್ಘಾನಿಸ್ತಾನದ ಫಾತಿಮಾ ಹಮೀದ್ ಕೂಡ ಪುಟ್ಟ ಮಗುವಿನೊಂದಿಗೆ ಪ್ರಮಾಣ ಪತ್ರ ಸ್ವೀಕರಿಸಿದರು.