ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ

ಮೃತ ಹರಿನಂದ ಮತ್ತು ಲಕ್ಷ್ಮೀನಂದ

ಕಂದಮ್ಮಗಳಿಬ್ಬರು ದುರ್ಮರಣ, ಹೆತ್ತಬ್ಬೆ ಚಿಂತಾಜನಕ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಇಬ್ಬರು ಮುದ್ದಾದ ಕಂದಮ್ಮಗಳನ್ನು ಬಾವಿಗೆಸೆದ ಹೆತ್ತಬ್ಬೆ ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ಘಟನೆ ಕಾಞ0ಗಾಡ್ ಸಮೀಪದ ಮಡಿಕೈಯಲ್ಲಿ ಗುರುವಾರ ನಡೆದಿದ್ದು, ಮಕ್ಕಳಿಬ್ಬರು ಸಾವನ್ನಪ್ಪಿದ್ದರೆ, ತೀವ್ರ ಅಸ್ವಸ್ಥಗೊಂಡ ತಾಯಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಡಿಕೈ ಕಾನಿಚ್ಚಿರದ ಸುಧಾಕರ ಎಂಬವರ ಪತ್ನಿ ಗೀತಾ (40) ತನ್ನ ಮಕ್ಕಳಾದ ಹರಿನಂದ (6) ಮತ್ತು ಲಕ್ಷ್ಮಿನಂದ (3) ಜೊತೆ ಮನೆ ಪಕ್ಕದ ಬಾವಿಗೆ ಹಾರಿದ್ದಾರೆ. ಹೊರಗಡೆ ತೆರಳಿದ್ದ ಪತಿ ಸುಧಾಕರ ಮರಳಿ ಬಂದಾಗ ಮೂವರು ಮನೆಯಲ್ಲಿರಲಿಲ್ಲ. ಆತಂಕಗೊಂಡು ಅವರು ಹುಡುಕಾಡಿದಾಗ ಬಾವಿಯೊಳಗೆ ಮೂವರು ಬಿದ್ದಿರುವುದು ಕಂಡುಬಂದಿದೆ.

ಈ ವೇಳೆ ಘಟನೆ ಅರಿತ ಸ್ಥಳೀಯರು ಕೂಡಲೇ ಅಗ್ನಿ ಶಾಮಕ ದಳಕ್ಕೆ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಮೂವರನ್ನು ಮೇಲಕ್ಕೆತ್ತಿದರೂ ಪುಟ್ಟ ಮಕ್ಕಳು ಅದಾಗಲೇ ಸಾವನ್ನಪ್ಪಿದ್ದರು.

ಗೀತಾಳನ್ನು ಕೂಡಲೇ ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಾವಿಗೆ ಬೀಳುವ ಸಂದರ್ಭದಲ್ಲಿ ಮೂವರ ತಲೆಗೂ ಗಂಭೀರ ಸ್ವರೂಪದ ಗಾಯವಾಗಿದೆ.

ಗೀತಾ ಕಾಞ0ಗಾಡ್ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದಾರೆ. ಪತಿ ಸುಧಾಕರ ಅಂಚೆ ಪಾಲಕರು. ಜೀವನದಲ್ಲಿ ಜಿಗುಪ್ಸೆ ಈ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಹೊಸದುರ್ಗ ಪೆÇಲೀಸರು ತಿಳಿಸಿದ್ದಾರೆ.