ಅತ್ತೆಗೆ ಊರವರೆಲ್ಲ ನೆಂಟರು

ಪ್ರ : ನಮ್ಮದು ಲವ್ ಮ್ಯಾರೇಜ್. ಅವನು ನನ್ನ ಕ್ಲಾಸ್‍ಮೇಟಾಗಿದ್ದ. ಬಿಂದಾಸಾಗಿದ್ದರೂ ಮುಗ್ಧ ಮತ್ತು ಮುಕ್ತ ಮನಸ್ಸಿನ ಅವನನ್ನು ಇಷ್ಟಪಟ್ಟೆ. ಏಳು ವರ್ಷಗಳ ಪ್ರೀತಿಯ ನಂತರ ನಮ್ಮ ಮದುವೆಯಾಗಿದ್ದು. ನಾವು ಪಿಯುಸಿಯಲ್ಲಿರುವಾಗಲೇ ನಮ್ಮ ನಡುವೆ ಇದ್ದ ಈ ಬಾಂಧವ್ಯವನ್ನು ಅವನು ಅಮ್ಮನ ಹತ್ತಿರ ಹೇಳಿದ್ದ. ಅವನ ಅಮ್ಮ ಕೂಡಾ ತುಂಬಾ ಫ್ರೀ. ಕಾಲೇಜಿನಲ್ಲಿರುವಾಗಲೇ ನಾನು ಅವನ ಜೊತೆ ಎಷ್ಟೋ ಸಲ ಅವರ ಮನೆಗೆ ಹೋಗಿದ್ದೆ. ಅಲ್ಲಿ ಉಳಿದಿದ್ದೂ ಉಂಟು. ಅವನ ತಾಯಿಯಂತೂ ಆಗಲೇ ನನ್ನನ್ನು ಸೊಸೆ ಅಂತ ಎಲ್ಲರಿಗೂ ಪರಿಚಯ ಮಾಡಿಕೊಡುತ್ತಿದ್ದರು. ಅವರು ಸ್ನೇಹಜೀವಿ. ಅದಕ್ಕಾಗಿ ಅವರನ್ನು ಎಲ್ಲರೂ ಇಷ್ಟಪಡುತ್ತಾರೆ. ಅವರ ಆ ಗುಣ ನನಗೆ ಮೊದಲು ತುಂಬಾ ಇಷ್ಟವಾಗುತ್ತಿತ್ತು. ನನ್ನ ಅಪ್ಪ, ಅಮ್ಮ ಸ್ಟ್ರಿಕ್ಟ್. ನನಗೆ ಮದುವೆಗಿಂತ ಮೊದಲೇ ನನ್ನ ಅತ್ತೆಯೇ ನನಗೆ ಅಮ್ಮನಿಗಿಂತ ಕ್ಲೋಸ್ ಇದ್ದರು. ಈಗ ನಮ್ಮ ಮದುವೆಯಾಗಿ ಒಂದು ವರ್ಷವಾಯಿತು. ನಮ್ಮವರ ಅಕ್ಕನಿಗೂ ಮದುವೆಯಾಗಿದೆ. ನಾನು ಮತ್ತು ಗಂಡ ಅತ್ತೆ, ಮಾವನ ಜೊತೆಯೇ ಇರುವುದು. ನನ್ನ ಗಂಡ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿರುವ ಕಾರಣ ವಾರದಲ್ಲಿ ಎರಡು, ಮೂರು ದಿನ ಹೊರ ಊರಿನಲ್ಲಿರುವ ಪ್ರಸಂಗ ಬರುತ್ತದೆ. ನಾನೂ ಒಂದು ಮಾಲ್‍ನಲ್ಲಿ ಅಕೌಂಟ್ಸ್ ಕ್ಲರ್ಕ್ ಕೆಲಸ ಮಾಡುತ್ತಾ ಎಂಬಿಎ ಪರೀಕ್ಷೆಯನ್ನೂ ಕಟ್ಟಿದ್ದೇನೆ. ನನ್ನ ಸಮಸ್ಯೆಯೆಂದರೆ ನಮ್ಮ ಮನೆಯಲ್ಲಿ ಯಾವಾಗ ನೋಡಿದರೂ ನೆಂಟರು. ಗೆಸ್ಟ್ ಇದ್ದರೆ ಮನೆಯಲ್ಲಿ ಕೆಲಸವೂ ಜಾಸ್ತಿ. ಗಲಾಟೆಯೂ ಹೆಚ್ಚು. ಮನೆಗೆ ಬಂದ ನಂತರ ಸ್ವಲ್ಪ ರೆಸ್ಟ್ ತೆಗೆದುಕೊಂಡು ಓದಲು ಕೂರೋಣ ಅಂದರೂ ಅದಕ್ಕೆ ಅವಕಾಶವಿಲ್ಲ. ಅತ್ತೆಯಂತೂ ಬಂದವರ ಹತ್ತಿರ ಮಾತಾಡ್ತಾ ಕೂತರೆ ಪ್ರಪಂಚವನ್ನೇ ಮರೆತುಬಿಡುತ್ತಾರೆ. ಮಾವ ಅವರಷ್ಟಕ್ಕೇ ಇದ್ದುಬಿಡುತ್ತಾರೆ. ಅದೂ ಅಲ್ಲದೇ ಖರ್ಚೂ ಖಂಡಾಪಟ್ಟೆಯಾಗುತ್ತದೆ. ಅತ್ತೆಯ ಈ ಗುಣದಿಂದಾಗಿ ನನ್ನ ಕರೀಯರೇ ಹಾಳಾಗುತ್ತಿದೆ. ಸ್ವಂತ ಮನೆ ಮಾಡಿಕೊಳ್ಳಬೇಕೆನ್ನುವ ನನ್ನ ಕನಸೂ ನನಸಾಗುವುದೂ ಕಷ್ಟ. ಇದನ್ನು ಹೇಗೆ ಹೇಳಲಿ ಅವರಿಗೆ?

: ಕೆಲವು ಹೆಂಗಸರ ಸ್ವಭಾವವೇ ಹಾಗೆ. ಅವರಿಗೆ ಊರವರೆಲ್ಲ ನೆಂಟರು. ಎಲ್ಲರನ್ನೂ ಹಚ್ಚಿಕೊಳ್ಳುವುದರಿಂದ ಅಂಥವರ ಮನೆಗೆ ಯಾರಿಗೂ ಹೋಗಲಿಕ್ಕೆ ಸಂಕೋಚವಿರುವುದಿಲ್ಲ. ನಿಮ್ಮದು ಲವ್ ಮ್ಯಾರೇಜ್ ಆಗಿರುವುದರಿಂದ ಮತ್ತು ಮದುವೆಗೂ ಮೊದಲಿನಿಂದಲೂ ನಿಮಗೆ ಅಲ್ಲಿಯ ವಾತಾವರಣ ಗೊತ್ತಿರುವುದರಿಂದ ನಿಮ್ಮ ಅತ್ತೆಗೂ ಈಗ ನಿಮ್ಮೆದುರು ಉಳಿದವರನ್ನು ಎಂಟರ್‍ಟೈನ್ ಮಾಡಲು ಸಂಕೋಚವಿಲ್ಲವಾಗಿದೆ. ಆದರೂ ನಿಮ್ಮ ಅತ್ತೆಗೆ ನಿಮ್ಮ ಸ್ಥಿತಿ ಅರ್ಥವಾಗಬೇಕಿತ್ತು. ನಿಮ್ಮ ಇಷ್ಟ-ಕಷ್ಟಗಳ ಬಗ್ಗೆ ಅವರೀಗ ಆಲೋಚಿಸಲೇಬೆಕು. ಮೊದಲಾದರೆ ಅವರೊಬ್ಬರೇ ಆ ಮನೆಗೆ ಯಜಮಾನಿ. ಈಗ ನಿಮಗೂ ಅಲ್ಲಿ ಅವರಷ್ಟೇ ಸ್ಥಾನ ಇದೆ. ಅದೂ ಮುಂದೆ ಬಾಳಿ ಬದುಕಬೇಕಾದವರು ನೀವಾಗಿರುವುದರಿಂದ ನಿಮ್ಮ ಅನುಕೂಲ ಅವರು ನೋಡಲೇಬೇಕು. ಅವರು ನಿಮ್ಮ ಜೊತೆ ಹೇಗಿದ್ದರೂ ಆತ್ಮೀಯವಾಗಿದ್ದಾರೆ. ಆದ್ದರಿಂದ ನೀವು ನಿಮಗಾಗುವ ಕಷ್ಟವನ್ನು ಅವರ ಹತ್ತಿರ ಹೇಳಿಕೊಳ್ಳಿ. ಕೊನೇಪಕ್ಷ ಪರೀಕ್ಷೆ ಮುಗಿಯುವವರೆಗಾದರೂ ಯಾರನ್ನೂ ಕರೆಯದಿರುವಂತೆ ಅವರನ್ನು ಮನವಿ ಮಾಡಿಕೊಳ್ಳಿ. ನಿಮ್ಮ ಮಾವ ಮತ್ತು ಗಂಡನನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಇನ್ನು ನಿಮ್ಮ ಕುಟುಂಬವೂ ಬೆಳೆಯುವುದರಿಂದ ಖರ್ಚೂ ಜಾಸ್ತಿಯಾಗುತ್ತದೆ. ಈಗಿನಿಂದಲೇ ಸ್ವಲ್ಪವಾದರೂ ಉಳಿತಾಯ ಮಾಡಬೇಕಾಗುತ್ತದೆ ಅಂತ ಅವರಿಗೆ ಕನ್ವಿನ್ಸ್ ಮಾಡಿ. ಅವರಿಗೂ ಅರ್ಥವಾಗಬಹುದು. ಅದರೂ ಅವರನ್ನು ಈ ವಯಸ್ಸಿನಲ್ಲಿ ಅತಿಯಾಗಿ ಕಂಟ್ರೋಲ್ ಮಾಡಲು ಮಾತ್ರ ಹೋಗಬೇಡಿ. ಅವರ ಮನಸ್ಸಿಗೆ ಆಘಾತವಾಗಬಹುದು.