ನೀರಿನಲ್ಲಿ ಮುಳುಗಿ ತಾಯಿ -ಮಗು ಸಾವು

ಪುತ್ರನ ರಕ್ಷಿಸಲು ಹೋಗಿ ಮೃತಪಟ್ಟ ಮಾತೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮಣಿಪಾಲ ಠಾಣಾ ವ್ಯಾಪ್ತಿಯ ಪಡುಅಲೆವೂರಿನ ದುರ್ಗಾನಗರ ಎಂಬಲ್ಲಿ ಮಂಗಳವಾರ ಬಟ್ಟೆ ತೊಳೆಯಲು ಹೋಗಿದ್ದ ತಾಯಿ-ಮಗು ಕಲ್ಲುಕೋರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಯಮುನಪ್ಪ ಎಂಬವರ ಪತ್ನಿ ದ್ಯಾಮವ್ವ ಯಾನೆ ನೀಲವ್ವ (28) ಮತ್ತು ಪುತ್ರ ಹನುಮಂತಪ್ಪ (6) ಮೃತಪಟ್ಟವರು. ಮಂಗಳವಾರ ನೀಲವ್ವ ತನ್ನ 6 ವರ್ಷದ ಮಗ ಹನುಮಂತಪ್ಪನೊಂದಿಗೆ ಬಟ್ಟೆ ತೊಳೆಯಲು ಪಡುಅಲೆವೂರಿನ ದುರ್ಗಾನಗರ ಪೆರುಪಾದೆ ಕಲ್ಲುಕೋರೆಗೆ ಹೋಗಿದ್ದಾರೆ. ತಾಯಿ ನೀಲವ್ವ ಬಟ್ಟೆ ತೊಳೆಯುತ್ತಿದ್ದು,

ಮಗ ಹನುಮಂತಪ್ಪ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿದ್ದಾನೆ. ಕೂಡಲೇ ನೀಲವ್ವ ಮಗನನ್ನು ರಕ್ಷಿಸಲು ನೀರಿಗೆ ಹಾರಿದ್ದಾರೆ. ಈ ಸಂದರ್ಭದಲ್ಲಿ ತಾಯಿ- ಮಗು ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಉಡುಪಿ ಅಗ್ನಿಶಾಮಕ ದಳ ಹಾಗೂ ಮಣಿಪಾಲ ಪೊಲೀಸರು ಬಂದಿದ್ದಾರೆ. ಅಗ್ನಿಶಾಮಕ ದಳ ಮುಳುಗಿದವರಿಗಾಗಿ ಸಾಕಷ್ಟು ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಕೊನೆಗೆ ರಾಂಪುರ ಸಮೀಪದ ದೆಂದೂರುಕಟ್ಟೆ ನಿವಾಸಿಗಳಾದ ನಿತೇಶ್, ಪ್ರಭಾಕರ್, ಅಶೋಕ್ ಶೆಟ್ಟಿ ಹಾಗೂ ಇನ್ನಿತರರು ಶವಗಳನ್ನು ಮೇಲಕ್ಕೆತ್ತಿದ್ದಾರೆಂದು ತಿಳಿದುಬಂದಿದೆ. ಮೃತ ನೀಲವ್ವ ಗಂಡ ಯಮುನಪ್ಪ ಮೇಸ್ತ್ರಿ ಕೆಲಸ ಮಾಡುತ್ತಿದ್ದ. ಇವರು ಪಡುಅಲೆವೂರಿನಲ್ಲಿ ಸುಮಾರು 20 ವರ್ಷಗಳಿಂದ ವಾಸವಾಗಿದ್ದರು. ನೀಲವ್ವಗೆ ಇನ್ನಿಬ್ಬರು ಸಣ್ಣ ಪ್ರಾಯದ ಹೆಣ್ಣುಮಕ್ಕಳಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುತ್ತಿಗೆದಾರ, ಜಿಲ್ಲಾಡಳಿತದ ನಿರ್ಲಕ್ಷ್ಯವೇ ಘಟನೆಗೆ ಕಾರಣ

 ಮಣಿಪಾಲ ಠಾಣಾ ವ್ಯಾಪ್ತಿಯ ಪಡುಅಲೆವೂರು ದುರ್ಗಾನಗರ ಎಂಬಲ್ಲಿರುವ ಪೆರುಪಾದೆ ಕಲ್ಲುಕೋರೆಯು ಸರಕಾರಿ ಜಾಗವಾಗಿದ್ದು, ಲೀಸಿಗೆ ಖಾಸಗಿ ಗುತ್ತಿಗೆದಾರರು ಕೋರೆಯಿಂದ ಪಾದೆ ಕಲ್ಲುಗಳನ್ನು ತೆಗೆಯುತ್ತಿದ್ದರು. ಲೀಸಿಗೆ ವಹಿಸಿಕೊಂಡಿದ್ದ ಗುತ್ತಿಗೆದಾರರು ಇನ್ನು ಈ ಕೋರೆಯಲ್ಲಿ ಕಲ್ಲು ತೆಗೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಿಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಲೀಸ್ ಪ್ರಕ್ರಿಯೆ ನಿಲ್ಲಿಸಿದೆ. ಬಳಿಕ ಲೀಸಿಗೆ ವಹಿಸಿಕೊಂಡ ಗುತ್ತಿಗೆದಾರರಾಗಲೀ, ಜಿಲ್ಲಾಡಳಿತವಾಗಲೀ ಈ ಕಲ್ಲುಕೋರೆ ಗುಂಡಿಯನ್ನು ಮುಚ್ಚದೇ ಅಥವಾ ತಂತಿ ಬೇಲಿ ಹಾಕದೇ ನಿರ್ಲಕ್ಷ್ಯ ್ಷವಹಿಸಿರುವುದೇ ಘಟನೆಗೆ ಕಾರಣವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.

LEAVE A REPLY