ಕೋರೆ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಕೇಸು : ಉಡುಪಿ ಡೀಸಿ

ತಾಯಿ-ಮಗು ದುರ್ಮರಣ ಪ್ರತಿಧ್ವನಿ

ನಮ್ಮ ಪ್ರತಿನಿಧಿ ವರದಿ

ಉಡುಪಿ : ದುರ್ಗಾನಗರದಲ್ಲಿ ತಾಯಿ ಮಗುವಿನ ಸಾವಿಗೆ ಕಾರಣವಾದ ಕಲ್ಲಿನ ಕೋರೆ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ತನಿಖೆ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಗುತ್ತಿಗೆದಾರನ ನಿರ್ಲಕ್ಷ್ಯದ ವಿರುದ್ಧ ಕ್ರಮಕೈಗೊಳ್ಳಿ ಎಂದರು.

“ಕಳೆದ ನಾಲ್ಕು ವರ್ಷಗಳಿಂದ ಈ ಕೋರೆ ಕಾರ್ಯನಿರ್ವಹಿಸುತ್ತಿದೆ.

ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲ್ಲುಕೋರೆಗಳಿಗೆ ಮುಂದಿನ 15 ದಿನಗಳ ಒಳಗೆ ಸೂಕ್ತ ರೀತಿಯಲ್ಲಿ ಬೇಲಿಹಾಕದೇ ಇದ್ದಲ್ಲಿ ನೀಡಿರುವ ಲೈಸನ್ಸ್ ರದ್ದು ಪಡಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಪರವಾನಿಗೆ ಇಲ್ಲದ ಕೋರೆಗಳ ಸರ್ವೆ ನಡೆಸಿ ಅವುಗಳನ್ನು ಮುಚ್ಚುವಂತೆ ಕೆಆರ್‍ಐಡಿಎಲ್ ಅಧಿಕಾರಿಗಳಿಗೆ ಸೂಚಿಸಿದರು. ಎರಡು ದಿನಗಳಲ್ಲಿ ವರದಿ ನೀಡಿ, ಕಲ್ಲುಕೋರೆಗಳನ್ನು ಮುಚ್ಚಿದ್ದರೂ ಅವುಗಳನ್ನು ಹಿಂದೆ ನಿರ್ವಹಿಸುತ್ತಿದ್ದ ಮಾಲಕರೇ ಬೇಲಿ ಹಾಕುವಂತೆ ನೋಡಿಕೊಳ್ಳಿ, ಸೂಕ್ತ ಬೇಲಿ ಹಾಕದೇ ಇದ್ದಲ್ಲಿ ಲೈಸನ್ಸ್ ರದ್ದುಗೊಳಿಸಿ, ದಂಡ ವಿಧಿಸಿ ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಈ ಘಟಕವು ಸ್ಥಗಿತಗೊಂಡಿದ್ದು, ಅದಕ್ಕೆ ಬೇಲಿ ಹಾಕುವಂತೆ ಸೂಚಿಸಲಾಗಿತ್ತು. ಆದರೆ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ತಾಯಿ, ಮಗು ಸಾವನ್ನಪ್ಪುವಂತಾಯಿತು.

LEAVE A REPLY