ಪ್ರಣಾಳಿಕೆಯಲ್ಲಿನ ಬಹುತೇಕ ಭರವಸೆ ಈಡೇರಿಸಲಾಗಿದೆ

ಸಿದ್ದರಾಮಯ್ಯ ಉವಾಚ

ಬೆಂಗಳೂರು : “ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲಿದೆ ಮತ್ತು ಬಿ ಎಸ್ ಯಡ್ಡಿಯೂರಪ್ಪ ಅಥವಾ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಸಾಧ್ಯವೇ ಇಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಕಡೂರಿನಲ್ಲಿ ಮಾಜಿ ಶಾಸಕ ಕೆ ಎಂ ಕೃಷ್ಣಮೂರ್ತಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

“ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಬಹುತೇಕ ಭರವಸೆಗಳನ್ನು ಈಡೇರಿಸಿದೆ. ರಾಜ್ಯದಲ್ಲಿ ಬಾಕಿ ಇರುವ ಎಂಟು ತಿಂಗಳ ಆಡಳಿತ ಅವಧಿಯಲ್ಲಿ ಮುಂದಿನ ಬಜೆಟ್ಟಿನಲ್ಲಿ ಉಳಿದ ಭರವಸೆಗಳನ್ನೂ ಈಡೇರಿಸಲಾಗುವುದು. ನಾವು ಈಗಾಗಲೇ 165ರಲ್ಲಿ 155 ಭರವಸೆಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಕೊಟ್ಟ ಆಶ್ವಾಸನೆ ಈಡೇರಿಸಿ ಜನಮನ ಗೆದ್ದಿದ್ದೇವೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

“ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದಾಗ ಮುಖ್ಯಮಂತ್ರಿಯೂ ಸೇರಿ ಅದರ ಬಹುತೇಕ ಸಚಿವ ಸಂಪುಟದ ನಾಯಕರು ಅಧಿಕಾರ ದುರುಪಯೋಗಪಡಿಸಿಕೊಂಡು ಜೈಲು ಸೇರಿದ್ದರು. ರಾಜ್ಯದಲ್ಲಿ ಬಿಜೆಪಿಯ ದುರಾಡಳಿತವನ್ನು ಜನರು ಇನ್ನೂ ಮರೆತಿಲ್ಲ. ಜೆಡಿಎಸ್ ಅಥವಾ ಬಿಜೆಪಿಗೆ ರೈತರ ಬಗ್ಗೆ ಮಾತನಾಡುವ ನೈತಿಕ ಹಕ್ಕೇ ಇಲ್ಲ. ಏಕೆಂದರೆ ರೈತರಿಗಾಗಿ ಎರಡೂ ಪಕ್ಷಗಳ ಸರ್ಕಾರಗಳು ಏನೂ ಮಾಡಿಲ್ಲ” ಎಂದರು.

“ಭದ್ರಾ ಮೇಲ್ದಂಡೆ ಯೋಜನೆಯ ಶೇ 80ರಷ್ಟು ಕಾರ್ಯ ಪೂರ್ಣಗೊಂಡಿದೆ. ಇದಕ್ಕಾಗಿ ರೂ 580 ಕೋಟಿ ವ್ಯಯಿಸಲಾಗಿದೆ. ಇದರಿಂದ ಜಿಲ್ಲೆಯ ಕಡೂರು ಮತ್ತು ಬೀರೂರು ನಗರಗಳಿಗೂ ಲಾಭವಾಗಲಿದೆ. ಭದ್ರಾ ಮೇಲ್ಡಂಡೆ ಯೋಜನೆಯಲ್ಲಿ ಕಡೂರು ಕೆರೆಯನ್ನೂ ಸೇರಿಸುವಂತೆ ಮಾಜಿ ಶಾಸಕ ಕೃಷ್ಣಮೂರ್ತಿ ಹೋರಾಡಿದ್ದರು” ಎಂದು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.