ರಾಜಕೀಯ ಪಕ್ಷಗಳ ಶೇ 69ರಷ್ಟು ದೇಣಿಗೆಗಳು ಅಜ್ಞಾತ ಮೂಲದಿಂದ

ನವದೆಹಲಿ : ಆರು ರಾಷ್ಟ್ರೀಯ ಹಾಗೂ 51 ಪ್ರಾದೇಶಿಕ ಪಕ್ಷಗಳೂ ಸೇರಿದಂತೆ ದೇಶದ ಒಟ್ಟು 57 ರಾಜಕೀಯ ಪಕ್ಷಗಳು 2004-05 ಹಾಗೂ 2014-15ರ ನಡುವೆ  ರೂ 11,367.34 ಕೋಟಿ ದೇಣಿಗೆ ಸಂಗ್ರಹಿಸಿದ್ದರೆ  ಇವಗಳಲ್ಲಿ ಶೇ 69ರಷ್ಟು ದೇಣಿಗೆಗಳು `ಅಜ್ಞಾತ’ ಮೂಲಗಳಿಂದ ಬಂದಿವೆಯೆಂದು  ದಿ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರೈಟ್ಸ್ ಸಂಸ್ಥೆ ನಡೆಸಿದ ಅಧ್ಯಯನವೊಂದರಿಂದ ತಿಳಿದುಬಂದಿದೆ.

ಹೆಚ್ಚಿನ ದೇಣಿಗೆಗಳಲ್ಲಿ ಮೂಲ ದಾನಿಗಳ ಬಗ್ಗೆ ತಿಳಿದು ಬಂದಿಲ್ಲವಾದ ಕಾರಣ ಮಾಹಿತಿ ಹಕ್ಕು ಕಾಯಿದೆಯ ಅನ್ವಯ  ರಾಜಕೀಯ ಪಕ್ಷಗಳು ದೇಣಿಗೆ ನೀಡಿದವರ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರ ಮುಂದಿಡಬೇಕೆಂದು ಸಂಸ್ಥೆ ಆಗ್ರಹಿಸಿದೆ.

ಒಟ್ಟು ಹನ್ನೊಂದು ಆರ್ಥಿಕ ವರ್ಷಗಳಲ್ಲ್ಲಿ ಕಾಂಗ್ರೆಸ್ ಪಕ್ಷ ಅತ್ಯಧಿಕ ದೇಣಿಗೆಗಳು – ರೂ 3,982 ಕೋಟಿ ಪಡೆದಿದೆಯೆಂದು ಸಂಸ್ಥೆ ತಿಳಿಸಿದೆ. ಪಕ್ಷ ಪಡೆದ ಒಟ್ಟು ದೇಣಿಗೆಗಳಲ್ಲಿ ಶೇ 83ರಷ್ಟು ಅಂದರೆ ರೂ 3,323.39 ಕೋಟಿ ದೇಣಿಗೆ ಯಾವ ಮೂಲಗಳಿಂದ ಬಂದಿವೆಯೆಂದು ತಿಳಿದಿಲ್ಲ. ಅತ್ತ ಮೇಲೆ ತಿಳಿಸಿದ ಅವಧಿಯಲ್ಲಿ ಬಿಜೆಪಿ  ರೂ 3,272.63 ಕೋಟಿ ದೇಣಿಗೆಗಳನ್ನು ಪಡೆದಿದ್ದರೆ  ಇದರಲ್ಲಿ ಶೇ 65ರಷ್ಟು ಅಥವಾ  ರೂ 2,125.91 ಕೋಟಿ ಮೊತ್ತದ ದೇಣಿಗೆಗಳ ಮೂಲ ತಿಳಿದು ಬಂದಿಲ್ಲ.

ಸಂಸ್ಥೆಯ ಪ್ರಕಾರ ಅಜ್ಞಾತ ಮೂಲಗಳಲ್ಲಿ-ಕೂಪನುಗಳ ಮಾರಾಟ, ಅಜೀವನ್ ಸಹಯೋಗ್ ನಿಧಿ, ಪರಿಹಾರ ನಿಧಿ, ಇತರ ಆದಾಯ ಹಾಗೂ  ಸ್ವಯಂ ದೇಣಿಗೆಗಳು ಸೇರಿವೆ.