ಬಾಂಗ್ಲಾದಲ್ಲಿ ಕಳೆದ ವರ್ಷ ಅಲ್ಪಸಂಖ್ಯಾತರ ಮೇಲೆ 1,000ಕ್ಕೂ ಅಧಿಕ ದಾಳಿ ಪ್ರಕರಣ

ಢಾಕಾ : ಬಾಂಗ್ಲಾದೇಶದಲ್ಲಿ ಕಳೆದ ವರ್ಷ ಅಲ್ಪಸಂಖ್ಯಾತರ ಮೇಲೆ ಕನಿಷ್ಠ 1,004 ದಾಳಿಗಳು ನಡೆದಿದ್ದರೆ 2016ರಲ್ಲಿ ಇಂತಹ ದಾಳಿಗಳ ಸಂಖ್ಯೆ 1,471 ಆಗಿತ್ತು ಎಂದು ಅಲ್ಲಿನ ಮಾನವ ಹಕ್ಕು ಸಂಘಟನೆಯಾದ ಬಾಂಗ್ಲಾದೇಶ ಹಿಂದು-ಬುದ್ಧ-ಕ್ರಿಶ್ಚಿಯನ್ ಒಯಿಕ್ಯ ಪರಿಷದ್ ಹೇಳಿದೆ.

ಧಾರ್ಮಿಕ ದ್ವೇಷ ಪಸರಿಸಿದ್ದಾರೆಂಬ ಸುಳ್ಳು ಆರೋಪಗಳ 7 ಪ್ರಕರಣಗಳು 2016ರಲ್ಲಿ ದಾಖಲಾಗಿದ್ದರೆ, 2017ರಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಕನಿಷ್ಠ 13 ಆಗಿತ್ತು, ಕಳೆದ ವರ್ಷ 228 ಮೂರ್ತಿಗಳಿಗೆ ಹಾನಿ ಮಾಡಲಾಗಿದ್ದರೆ ಈ ಸಂಖ್ಯೆ 2016ರಲ್ಲಿ 259 ಆಗಿತ್ತು, ಒಟ್ಟು 14 ಮೂರ್ತಿಗಳನ್ನು ಕಳೆದ ವರ್ಷ ಕಳವು ಮಾಡಲಾಗಿತ್ತು ಎಂದು ಪರಿಷದ್ ಮಾಹಿತಿ ನೀಡಿದೆ.

ಪತ್ರಿಕಾ ವರದಿಗಳನ್ನು ಆಧರಿಸಿ ಪರಿಷದ್ ಈ ಅಂಕಿಸಂಖ್ಯೆಗಳನ್ನು ನೀಡಿದೆ. “2015ನೇ ವರ್ಷಕ್ಕೆ ಹೋಲಿಸಿದಾಗ 2017ರಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿದ್ದರೂ ವರದಿಯಾದ ಒಂದು ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ ಅಂದಾಜು 30,000 ಜನರು ತೊಂದರೆಗೀಡಾಗಿದ್ದಾರೆ” ಎಂದು ಪರಿಷದ್ ಪ್ರಧಾನ ಕಾರ್ಯದರ್ಶಿ ರಾಣಾ ದಾಸಗುಪ್ತಾ ಹೇಳಿದ್ದಾರೆ. ವಾಸ್ತವವಾಗಿ ಇದಕ್ಕಿಂತಲೂ ಹೆಚ್ಚು ಘಟನೆಗಳು ನಡೆದಿರಬಹುದು ಹಾಗೂ ಇವುಗಳು ಮಾಧ್ಯಮದಲ್ಲಿ ವರದಿಯಾಗಿರದೇ ಹೋಗಿರಬಹುದು ಎಂದೂ ಅವರು ತಿಳಿಸಿದ್ದಾರೆ.

ಕಳೆದ ವರ್ಷ ಒಟ್ಟು 82 ಜನರು ಇಂತಹ ದೌರ್ಜನ್ಯಗಳಿಂದ ಸಾವನ್ನಪ್ಪಿದ್ದರೆ 22 ಮಂದಿ ಶಂಕಾಸ್ದಪವಾಗಿ ಸಾವನ್ನಪ್ಪಿದ್ದಾರೆ. 2016ರಲ್ಲಿ 71 ಮಂದಿ ಸಾವನ್ನಪ್ಪಿದ್ದರೆ, 29 ಮಂದಿಯ ಮೃತದೇಹಗಳು ಶಂಕಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದವು. ದೇಶದಲ್ಲಿ ದೇವಳ, ಉದ್ಯಮ, ಮನೆಗಳು ಹಾಗೂ ಇತರ ಸ್ಥಳಗಳ ಮೇಲೆ 471 ದಾಳಿ ಪ್ರಕರಣಗಳೂ ನಡೆದಿವೆ ಹಾಗೂ 44 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಕಳೆದ ವರ್ಷದ ಪ್ರತೀ ತಿಂಗಳೊಂದರಲ್ಲಿ ಸರಾಸರಿ 2,500 ಜನರು ಹಾಗೂ ವ್ಯಾಪಾರಿ ಸಂಸ್ಥೆಗಳು ಈ ದ್ವೇಷದ ಘಟನೆಗಳಿಂದ ಬಾಧಿತರಾಗಿದ್ದರು ಎಂದೂ ಪರಿಷದ್ ತಿಳಿಸಿದೆ.

 

 

LEAVE A REPLY