ಉಗ್ರ ಸಂಘಟನೆಗಳಿಂದ ಇನ್ನಷ್ಟು ದಾಳಿ ಸಂಚು ?

ವಾಷಿಂಗ್ಟನ್ : “ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಭಾರತ ಮತ್ತು ಅಫ್ಘಾನಿಸ್ತಾನಗಳಲ್ಲಿ ದಾಳಿ ನಡೆಸಲು ಸಂಚು ಹೂಡುತ್ತಿವೆ. ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ಇಸ್ಲಾಮಾಬಾದ್ ವಿಫಲವಾಗಿದೆ” ಎಂದು ಅಮೆರಿಕಾದ ನ್ಯಾಷನಲ್ ಇಂಟಲಿಜನ್ಸ್ ನಿರ್ದೇಶಕ ಡೇನಿಯಲ್ ಕೋಟ್ಸ್ ಹೇಳಿದ್ದಾರೆ.

ಗುಪ್ತಚರಕ್ಕೆ ಸಂಬಂಧಿಸಿದ ಸೆನೆಟ್ ಸೆಲೆಕ್ಟ್ ಕಮಿಟಿ ಸದಸ್ಯರ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ಅವರು, “ಈ ಉಗ್ರ ಗುಂಪುಗಳು ಭಾರತ ಮತ್ತು ಅಫ್ಘಾನಿಸ್ತಾನಗಳಲ್ಲಿ ದಾಳಿ ನಡೆಸುವುದನ್ನು ಮುಂದುವರಿಸುತ್ತವೆ. ಭಾರತ-ಪಾಕ್ ಸಂಬಂಧಗಳು ಹದಗೆಡಲು ಪಾಕಿಸ್ತಾನವೇ ಕಾರಣ. ಈ ವರ್ಷದಲ್ಲೇನಾದರೂ ದೊಡ್ಡ ಉಗ್ರ ದಾಳಿಯೊಂದು ನಡೆದು ಬಿಟ್ಟರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು?? ಎಂದು ಎಚ್ಚರಿಸಿದ್ದಾರೆ.

“ತನ್ನ ನೀತಿಗಳಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಾನು ಒಂಟಿಯಾಗುವ ಭಯ ಪಾಕಿಸ್ತಾನವನ್ನು ಕಾಡುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವೃದ್ಧಿಸುತ್ತಿರುವ ಭಾರತದ ಘನತೆ, ಹಲವು ದೇಶಗಳತ್ತ ಸ್ನೇಹಹಸ್ತ ಚಾಚುತ್ತಿರುವ ಅದರ ನೀತಿ ಮತ್ತು ಅಮೆರಿಕಾದೊಂದಿಗಿನ ತನ್ನ ಸಂಬಂಧ ಬಲಗೊಳಿಸಿರುವುದು ಪಾಕಿಸ್ತಾನಕ್ಕೆ ಕಳವಳ ಮೂಡಿಸಿದೆ. ಇದೆಲ್ಲದಕ್ಕೆ ಪ್ರತಿಯಾಗಿ ಪಾಕಿಸ್ತಾನ ಚೀನಾದತ್ತ ಮುಖ ಮಾಡಿದ್ದು ಅದು ಹಿಂದೂ ಮಹಾಸಾಗರದಲ್ಲಿ ತನ್ನ ಪ್ರಭಾವ ಹೆಚ್ಚಿಸುವಲ್ಲಿ ಸಹಾಯ ಮಾಡುವುದು?? ಎಂದು ಹೇಳಿದ್ದಾರೆ.