2016ರಲ್ಲಿ ಕಹಿ ಘಟನೆಗಳೇ ಹೆಚ್ಚು

ವರ್ಷ ಪೂರ್ತಿ ಸುದ್ದಿಯಾದ ಎತ್ತಿನಹೊಳೆ ಯೋಜನೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟಿಸಿದ ನಾಗರಿಕರು (ಸಂಗ್ರಹ ಚಿತ್ರ)

ಮಂಗಳೂರು : 2016ನೇ ವರ್ಷವು ಸಿಹಿ ಘಟನೆಗಳಿಂತ ಹೆಚ್ಚು ಕಹಿ ಘಟನೆಗಳನ್ನೇ ನೆನಪಿಸುವಂತೆ ಮಾಡುತ್ತ ಕೊನೆಯಾಗಿದೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಮರೆಯಲಾಗದ ಕೆಲವು ಕಹಿ ಘಟನೆಗಳು ನಡೆದಿವೆ.

ಎತ್ತಿನಹೊಳೆ ಯೋಜನೆ

2016ರಲ್ಲಿ ಪ್ರತಿದಿನ ಎಂಬಂತೆ ಎತ್ತಿನಹೊಳೆ ಯೋಜನೆ ಸುದ್ದಿಯಾಗಿದೆ. ಈ ವಿಷಯದಲ್ಲಿ ಮೇ 19ರಂದು ದಕ್ಷಿಣ ಕನ್ನಡದಲ್ಲಿ ಬಂದ್ ನಡೆದಿತ್ತು. ಈ ಯೋಜನೆಯ ಸುತ್ತಲ ವಿವಾದ 2017ಕ್ಕೆ ದಾಟಿದೆ.

ವಿನಾಯಕ ಬಾಳಿಜಾ ಕೊಲೆ ಮಾರ್ಚ್ 21ರಂದು ನಡೆದಿದ್ದು, ಅಲ್ಲಿಯವರೆಗೆ ಅವರೊಬ್ಬ ಆರ್ ಟಿ ಐ ಕಾರ್ಯಕರ್ತ ಎಂದು ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಕೊಲೆಯಲ್ಲಿ ನಮೋ ಬ್ರಿಗೇಡಿನ ಸ್ಥಾಪಕಾಧ್ಯಕ್ಷ ನರೇಶ್ ಶೆಣೈ ಶಾಮೀಲಾಗಿರುವ ಆರೋಪ ಕೇಳಿ ಬಂದ ಬಳಿಕ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದರು. ಶೆಣೈ ಮತ್ತು ಇತರ ಬಂಧನದಿಂದ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.

ಉಡುಪಿಯಲ್ಲಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ್ ಹಾಗೂ ಜ್ಯೋತಿಷಿ ನಿರಂಜನ್ ಭಟ್ ಕಂಬಿ ಎಣಿಸುತ್ತಿದ್ದಾರೆ. ಈ ಘಟನೆ ದಕ್ಷಿಣ ಕನ್ನಡದಲ್ಲೂ ಭಾರೀ ಸುದ್ದಿ ಮಾಡಿದೆ. ಶೆಟ್ಟಿಯನ್ನು ಕೊಲೆಗೈದು ಹೋಮಕುಂಡದಲ್ಲಿ ಸುಟ್ಟುಹಾಕಲಾಗಿದ್ದು, ಇದು 1995ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ತಂದೂರ್ ಪ್ರಕರಣ ನೆನಪಿಸುವಷ್ಟು ಕರಾಳವಾಗಿದೆ.

ಜೂನ್ 21ರಂದು ತ್ರಾಸಿಯಲ್ಲಿ ಸಂಭವಿಸಿದ ಶಾಲಾ ಬಸ್ ದುರ್ಘಟನೆಯಲ್ಲಿ ಎಂಟು ಮಕ್ಕಳು ಮೃತಪಟ್ಟು, 10 ಮಕ್ಕಳು ಗಾಯಗೊಂಡ ಘಟನೆ ಮರೆಯಲು ಸಾಧ್ಯವಿಲ್ಲ. ನಂತರ ಶಾಲಾ ಬಸ್ಸುಗಳಲ್ಲಿ ಅಧಿಕ ಸಾಂದ್ರತೆಯಲ್ಲಿ ಮಕ್ಕಳನ್ನು ಸಾಗಿಸುವುದಕ್ಕೆ ನಿರ್ಬಂಧ ಹೇರಲಾಗಿದ್ದರೂ, ಅವೆಲ್ಲ ಈಗ ನಾಮಕಾವಸ್ಥೆಯಾಗಿದೆ.

ಆಗಸ್ಟ್ 17ರಂದು ಬ್ರಹ್ಮಾವರದ ಕೆಂಜಾರಿನಲ್ಲಿ ದನ ಸಾಗಾಟ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿ ಕೊಲೆ ಮತ್ತು ಹಿಂದೂ ಕಾರ್ಯಕರ್ತ ಅಕ್ಷಯ್ ದೇವಾಡಿಗ ಮೇಲೆ ಗಂಭೀರ ಹಲ್ಲೆ ಘಟನೆ ನಡೆದಿತ್ತು. ಈ ಎರಡೂ ಕೇಸಿನಲ್ಲಿ ಹಿಂದೂ ಸಮುದಾಯದವರೇ ಆರೋಪಿಗಳಾಗಿದ್ದಾರೆ.

ಜುಲೈ 7ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿವೈಎಸ್ಪಿ ಗಣಪತಿ ಮಡಿಕೇರಿಯಲ್ಲಿ ನಿಗೂಢ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಲ್ಲದೆ 2016ರಲ್ಲಿ ಭಾರೀ ಸಂಖ್ಯೆಯ ಸರ್ಕಾರಿ ಅಧಿಕಾರಿಗಳು ಇದೇ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ವರ್ಷದ ಅಂತ್ಯದಲ್ಲಿ ತೆರಿಗೆಯಲ್ಲಿ ಜನರಿಗೆ ಹೊರೆಯಾಗಿದೆ. ಎಸ್ ಎ ಎಸ್.ನಡಿ ಆಸ್ತಿ ತೆರಿಗೆ ಹೆಚ್ಚಿಸಲಾಗಿದೆ. ನೋಟು ನಿಷೇಧದಿಂದ ಇಲ್ಲಿನವರೂ ಬಹಳಷ್ಟು ತೊಂದರೆಗೀಡಾಗಿದ್ದಾರೆ.

ಈ ಋತುವಿನಲ್ಲಿ ಕನಿಷ್ಠ ಮಳೆಯಾಗಿದ್ದು, ನದಿಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿದೆ. 2017ರಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚಿರುತ್ತದೆ.

ಸಕಾರಾತ್ಮಕ ವರ್ಷ ಹೇಗೆ ?

ಹಿಂದಿನ ವರ್ಷದಂತೆ ಈ ವರ್ಷವೂ ಬೆರಳೆಣಿಕೆಯ ಸಕಾರಾತ್ಮಕ ವಿಷಯಗಳಿವೆ. ಮಂಗಳೂರು-ಬೆಂಗಳೂರಿಗೆ ಎಚ್ ಪಿ ಸಿ ಎಲ್ ಗ್ಯಾಸ್ ಪೈಪ್ ಲೈನ್ ಅಳವಡಿಸಲಾಗುತ್ತಿದ್ದು, ಈ ಯೋಜನೆಯಿಂದ ಗ್ಯಾಸ್ ಟ್ಯಾಂಕರ್ ಸಂಚಾರದ ಮೇಲೆ ಲಗಾಮು ಹಾಕಿದಂತಾಗಿದೆ.