ಖಾಸಗಿ ಶಾಲೆಗಳಿಗೆ ಹೆಚ್ಚಿದ ಪ್ರವೇಶಾತಿ

ನವದೆಹಲಿ : 2010-11ರಿಂದ 2015-16ರ ಅವಧಿಯಲ್ಲಿ ದೇಶದ 20 ರಾಜ್ಯಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿನ ಪ್ರವೇಶಾತಿ ಪ್ರಮಾಣ 13 ದಶಲಕ್ಷದಷ್ಟು ಕುಸಿಸಿದ್ದು, ಇದೇ ವೇಳೆ ಖಾಸಗಿ ಶಾಲೆಗಳಲ್ಲಿನ ಪ್ರವೇಶಾತಿ ಪ್ರಮಾಣ 17.5 ದಶಲಕ್ಷದಷ್ಟು ಹೆಚ್ಚಾಗಿದೆ ಎಂದು ಅಧ್ಯಯನವೊಂದರಲ್ಲಿ ಹೇಳಲಾಗಿದೆ.

ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ನೀಡುವ ವೇತನ ಚೀನಾಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಾಗಿದ್ದರೂ ಕಳೆದ ಐದು ವರ್ಷಗಳಲ್ಲಿ ಸರಾಸರಿ ದಾಖಲಾತಿ ಪ್ರಮಾಣದಲ್ಲಿ ತೀವ್ರ ಕುಸಿತವಾಗಿದ್ದು ಒಂದು ಶಾಲೆಗೆ ಸರಾಸರಿ 102 ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ ಎಂದು ಲಂಡನ್ನಿನ ಅಂತಾರಾಷ್ಟ್ರೀಯ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆಯ ಗೀತಾ ಗಾಂಧಿ ಕಿಂಗ್ಡನ್ ತಮ್ಮ ಅಧ್ಯಯನ ವರದಿಯಲ್ಲಿ ಹೇಳುತ್ತಾರೆ.

ಆದರೂ  20 ರಾಜ್ಯಗಳ ಶಾಲಾ ಮಕ್ಕಳ ಪೈಕಿ ಶೇ 65ರಷ್ಟು ಅಂದರೆ 113 ದಶಲಕ್ಷದಷ್ಟು ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ವ್ಯಾಸಂಗ ಮಾಡುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಖಾಸಗಿ ಶಾಲೆಗಳಲ್ಲಿ ಬೋಧನೆ ಮತ್ತು ಶಿಕ್ಷಣದ ಗುಣಮಟ್ಟ ಉತ್ತಮವಾಗಿರುತ್ತದೆ ಎಂಬ ಭ್ರಮೆಯಿಂದಲೇ ಹೆಚ್ಚು ಜನರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಒಂದು ಅಧ್ಯಯನದ ಪ್ರಕಾರ ಖಾಸಗಿ ಶಾಲಾ ಮಕ್ಕಳ ಕಲಿಕಾ ಸಾಮಥ್ರ್ಯ ಸರ್ಕಾರಿ ಶಾಲಾ ಮಕ್ಕಳಿಗಿಂತಲೂ ಉತ್ತಮವಾಗಿರುತ್ತದೆ. ಸರ್ವ ಶಿಕ್ಷಣ ಅಭಿಯಾನದಡಿ ಸರ್ಕಾರ ವರ್ಷಕ್ಕೆ 1.16 ಲಕ್ಷ ಕೋಟಿ ರೂ ಖರ್ಚು ಮಾಡಿದರೂ 2009-14ರ ಅವಧಿಯಲ್ಲಿ ಪ್ರಾಥಮಿಕ ಶಿಕ್ಷಣ ಗುಣಮಟ್ಟ ಕುಸಿದಿರುವುದು ಕಂಡುಬರುತ್ತದೆ.

ಕೇವಲ ಶೇ 20ರಷ್ಟು ಸರ್ಕಾರಿ ಶಿಕ್ಷಕರು ಮಾತ್ರ ತರಬೇತಿ ಹೊಂದಿದವರಾಗಿರುತ್ತಾರೆ. ಆದರೆ ಈ ವಿದ್ಯಮಾನ ಸಾರ್ವತ್ರಿಕ ಎನ್ನಲಾಗುವುದಿಲ್ಲ, ಪ್ರತಿಯೊಂದು ರಾಜ್ಯದಲ್ಲೂ ಭಿನ್ನ ಪರಿಸ್ಥಿತಿ ಇದೆ ಎಂದು ಕಿಂಗ್ಡನ್ ತಮ್ಮ ವರದಿಯಲ್ಲಿ ಹೇಳಿದ್ದಾರೆ.