ನ್ಯಾಯದ ನಿರೀಕ್ಷೆಯಲ್ಲಿ ಮೂಲಗೇಣಿ ಒಕ್ಕಲುದಾರರು

ನಗರದಲ್ಲಿ ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ ಸಭೆ ನಡೆಯಿತು

ನಗರದಲ್ಲಿ ನಡೆಯಿತು ರಕ್ಷಣಾ ವೇದಿಕೆ ಸಭೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮೂಲಗೇಣಿ ಒಕ್ಕಲುಗಳಿಗೆ ಮಾಲಿಕತ್ವ ನೀಡುವ ಕಾಯ್ದೆ 2012ರಲ್ಲಿ ಜಾರಿಗೆ ಬಂದಿದೆ. ಈ ಬಗ್ಗೆ ಕೋರ್ಟಿನಲ್ಲಿ ದಾವೆಯಿದ್ದರೂ ಕಾಯ್ದೆಗೆ ನಿಯಮಾವಳಿ ರೂಪಿಸಿ ಜಾರಿಗೊಳಿಸಲು ತಡೆ ಏನೂ ಇಲ್ಲ. ಆದರೆ ಈ ನಿಯಮಾವಳಿಗೆಳು ಸಿದ್ಧವಿದ್ದರೂ ಸರಕಾರ ಅದನ್ನು ಜಾರಿಗೊಳಿಸಲು ಮುಂದಾಗುತ್ತಿಲ್ಲ. ಇದೀಗ ರಾಜ್ಯ ಸರಕಾರ ಮುಂದಿನ ದಿನಗಳಲ್ಲಾದರೂ ಈ ಕುರಿತ ಮಸೂದೆಯೊಂದನ್ನು ಶೀಘ್ರವೇ ಜಾರಿಗೆ ತಂದೀತು ಎನ್ನುವ ಆಶಾಭಾವನೆಯನ್ನು ಮೂಲಗೇಣಿ ಒಕ್ಕಲುದಾರರು ಹೊಂದಿದ್ದಾರೆ.

ಭಾನುವಾರ ಮಂಗಳೂರಿನಲ್ಲಿ ನಡೆದ ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ ಸಭೆ ನಡೆದು ಭೂಮಾಲಕತ್ವವನ್ನು ಅನುಭೋಗಿಸುವ ಹಕ್ಕನ್ನು ಭೂಮಾಲಕರಿಗೆ ನೀಡುವಂತೆ ಇದೀಗ ಕೋರ್ಟಿನಲ್ಲಿ ತಮ್ಮ ಪರವಾಗಿ ತೀರ್ಪು ಬಂದೀತು ಎಂದು ಹೋರಾಟಗಾರರು ಆಶಾಭಾವ ವ್ಯಕ್ತಪಡಿಸಿದರು.

ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುರಾತನ ಕಾಲದಿಂದಲೂ ಮೂಲಗೇಣಿ ವ್ಯವಸ್ಥೆ ಚಾಲ್ತಿಯಲ್ಲಿದೆ. ಕನಿಷ್ಠ ಬಾಡಿಗೆ ದರದಲ್ಲಿ ಈ ವ್ಯವಸ್ಥೆಯಲ್ಲಿ ವ್ಯಕ್ತಿ, ಸಂಸ್ಥೆ ಅಥವಾ ಕುಟುಂಬವು ಆತ ಪಡೆದಿರುವ ಭೂಮಾಲಕತ್ವದ ಹಕ್ಕನ್ನು ಅನುಭವಿಸಬಹುದಾಗಿದೆ. ಬಾಡಿಗೆ(ಮೂಲಗೇಣಿ)ಯನ್ನು ಇದೀಗ ಮತ್ತೆ ಪರಿಷ್ಕರಣೆ ಮಾಡಲಾಗಿಲ್ಲ. ಹೀಗಾಗಿ ಬಾಡಿಗೆದಾರರು ತನ್ನ ಆಸ್ತಿಯನ್ನು ಮಾರಾಟ ಮಾಡುವ ಹಕ್ಕನ್ನು ಹೊಂದಿರುವುದಿಲ್ಲ. ಭೂಮಾಲಕನ ಅನುಮತಿ ಇಲ್ಲದೇ ಆತ ಯಾವುದೇ ಚಟುವಟಿಕೆಗಳನ್ನು ಇಲ್ಲಿ ಮಾಡುವ ಹಾಗಿಲ್ಲ. ಈ ವ್ಯವಸ್ಥೆ ಪುರಾತನ ಕಾಲದಲ್ಲಿ ಅಂದರೆ ಸ್ವಾತಂತ್ರ್ಯ ಪೂರ್ವದಲ್ಲೇ ಚಾಲ್ತಿಯಲ್ಲಿತ್ತು. ಮುಖ್ಯವಾಗಿ ಧಾರ್ಮಿಕ ಸಂಸ್ಥೆಗಳು ಇದರ ಪ್ರಯೋಜವನ್ನು ಪಡೆದುಕೊಂಡಿದ್ದವು.

ಮೂಲಗೇಣಿ ಒಕ್ಕಲುಗಳಿಗೆ ಮಾಲಕತ್ವ ನೀಡುವ ಕಾಯ್ದೆ 2012ರಲ್ಲೇ ಜಾರಿಗೆ ಬಂದಿದ್ದರೂ ಅದನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ನಿಯಮಾವಳಿಯನ್ನು ಈತನಕ ಜಾರಿಗೊಳಿಸಿಲ್ಲ. ನಿಯಮಾವಳಿಗಳನ್ನು ಸರಕಾರದ ಕಂದಾಯ ಇಲಾಖೆಯ ನಿರ್ದೇಶನದಂತೆ ಸಿದ್ಧಪಡಿಸಲಾಗಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳಲ್ಲಿ ಅವಿರೋಧವಾಗಿ ಮಂಜೂರಾಗಿರುವ ಈ ಕಾಯ್ದೆಯನ್ನು ರಾಷ್ಟ್ರಪತಿಗಳ ಅಂಕಿತ ಬಿದ್ದೊಡನೆಯೇ ಜಾರಿಗೊಳಿಸುವುದು ಸರಕಾರದ ಕರ್ತವ್ಯವಾಗಿತ್ತು. ಆದರೆ ಸರಕಾರ ಈ ಕುರಿತು ದಿವ್ಯ ನಿರ್ಲಕ್ಷ್ಯ ಮೆರೆಯುತ್ತಿದೆ.

ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ ಸುಮಾರು 9 ವರ್ಷಗಳ ಹಿಂದೆ ಇದಕ್ಕೆ ಬಹಳಷ್ಟು ಹೋರಾಟವನ್ನು ಪ್ರಾರಂಭಿಸಿತು. ಒಕ್ಕಲುದಾರರಲ್ಲಿ ಜಾಗೃತಿ ಮೂಡಿಸಿತು. ಹಿರಿಯ ನ್ಯಾಯವಾದಿಯೊಬ್ಬರ ನೇತೃತ್ವದಲ್ಲಿ ಕಾಯ್ದೆಯೊಂದನ್ನು ಮಾಡಿ ಕಾನೂನಾತ್ಮಕ ಹೋರಾಟ ಆರಂಭಿಸಿತು. ಹೀಗಾಗಿ ಮೂಲಗೇಣಿ ಕಾಯ್ದೆ ರಾಜ್ಯ ಸರಕಾರದ ಸದನದಲ್ಲಿ ಅನುಮೋದನೆಗೊಂಡಿತು. ರಾಷ್ಟ್ರಪತಿಗಳೂ ಅಂಕಿತ ಹಾಕಿದರು. ಪ್ರಸ್ತುತ ಹೈಕೋರ್ಟಿನಲ್ಲಿ ಮೂಲಗೇಣಿ ಒಕ್ಕಲುದಾರರ ಹಕ್ಕುಗಳ ಬಗ್ಗೆ ಹೋರಾಟ ನಡೆದಿದೆ.

“ಮೂಲಗೇಣಿ ಒಕ್ಕಲುದಾರರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ನಡೆಸಿ ಸಫಲರಾಗುವ ಹಾದಿಯಲ್ಲಿದ್ದಾರೆ” ಎಂದು ವೇದಿಕೆ ಅಧ್ಯಕ್ಷ ಮ್ಯಾಕ್ಸಿಂ ಡಿಸಿಲ್ವಾ ಹೇಳಿದ್ದಾರೆ. “ಕೋರ್ಟ್ ಆದೇಶದ ಮೂಲಕ ತಮಗೆ ನ್ಯಾಯ ಸಿಗುವ ಭರವಸೆ ಇದೆ. ಒಂದು ವೇಳೆ ಈ ಬಿಲ್ ಮಂಜೂರಾದರೆ ಆರು ಜಿಲ್ಲೆಗಳ ಸುಮಾರು 1.5 ಲಕ್ಷ ಮೂಲಗೇಣಿ ಒಕ್ಕಲುದಾರರು ಪರಿಹಾರವನ್ನು ಕಂಡುಕೊಳ್ಳಲಿದ್ದಾರೆ” ಎಂದವರು ಹೇಳಿದ್ದಾರೆ.