ಮೂಡುಬಿದಿರೆಯ ಯುವತಿ ಬೆಂಗಳೂರಿನಲ್ಲಿ ರೇಪ್

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಇಲ್ಲಿಗೆ ಸಮೀಪದ ಅಲಂಗಾರಿನ ದಲಿತ ಯುವತಿಯೊಬ್ಬಳು ಬೆಂಗಳೂರಿನಲ್ಲಿ ತನ್ನ ಸ್ನೇಹಿತನ ಗೆಳೆಯನಿಂದ ಅತ್ಯಾಚಾರಕ್ಕೊಳಗಾಗಿ ಗರ್ಭವತಿಯಾಗಿದ್ದು ಕೆಲ ದಿನಗಳ ಹಿಂದೆ ಮೂಡುಬಿದಿರೆ ಸರಕಾರಿ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಈಕೆ ಕೆಲಸ ನಿಮಿತ್ತ ಬೆಂಗಳೂರಿಗೆ ತೆರಳಿದ್ದು ಅಲ್ಲಿ ಅಲಂಗಾರಿನವನಾದ ಪ್ರವೀಣನ ಪರಿಚಯವಾಗಿ ಅವನ ಜತೆ ಕಟ್ಟಡ ಕೆಲಸಕ್ಕೆ ಹೋಗುತ್ತಿದ್ದಳು. ಕಳೆದ ಮಾರ್ಚಿನಲ್ಲಿ ಬೆಂಗಳೂರಿನ ಸೀಗೆಹಳ್ಳಿಯಲ್ಲಿರುವ ಪ್ರವೀಣನ ಮನೆಯಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮವಿದ್ದು ಅಲಂಗಾರಿನ ಯುವತಿ ಅದರಲ್ಲಿ ಪಾಲ್ಗೊಂಡಿದ್ದಳು. ಈ ಕಾರ್ಯಕ್ರಮಕ್ಕೆ ಬಂದಿದ್ದ ಪ್ರವೀಣನ ಸ್ಮೇಹಿತ ಬೆಂಗಳೂರಿನ ಹೇಮಂತ ಗೌಡನಿಗೆ ಅಲಂಗಾರಿನ ಯುವತಿಯ ಪರಿಚಯವಾಯಿತು. ಕಾರ್ಯಕ್ರಮಕ್ಕೆ ಬಂದಿದ್ದ ಪ್ರವೀಣನ ಕೆಲ ಬಂಧುಗಳು ರಾತ್ರಿ ಮನೆಯಲ್ಲಿ ಉಳಿದುಕೊಂಡಿದ್ದರು. ಅಲಂಗಾರಿನ ಯುವತಿ ಕೂಡ ಅದೇ ಮನೆಯಲ್ಲಿ ರಾತ್ರಿ ಉಳಿದಿದ್ದರೆ ಬರ್ತಡೇ ಕಾರ್ಯಕ್ರಮದಲ್ಲಿ ಅಲಂಗಾರಿನ ಯುವತಿಯನ್ನು ಪರಿಚಯಸಿಕೊಂಡಿದ್ದ ಹೇಮಂತ ಗೌಡ ಕೂಡ ರಾತ್ರಿ ಪ್ರವೀಣನ ಮನೆಯಲ್ಲಿ ತಂಗಿದ್ದ. ರಾತ್ರಿ ಅಲಂಗಾರಿನ ಯುವತಿಯನ್ನು ಏನೊ ನೆಪ ಹೇಳಿ ಎಬ್ಬಿಸಿದ ಆತ ಬಳಿಕ ರೇಪ್ ಮಾಡಿದ್ದ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಅತ್ಯಾಚಾರಕ್ಕೊಳಗಾದ ಯುವತಿ ಗರ್ಭ ಧರಿಸಿದ್ದು ಇತ್ತೀಚೆಗೆ ಊರಿಗೆ ಬಂದಿದ್ದಳೆನ್ನಲಾಗಿದೆ. ಕೆಲ ದಿನಗಳ ಹಿಂದೆ ಹೆರಿಗೆಗೆಂದು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆನ್ನಲಾಗಿದೆ. ಯುವತಿ ನೀಡಿದ ದೂರಿನಂತೆ ಮೂಡುಬಿದಿರೆ ಪೊಲೀಸರು ಆರೋಪಿ ಬೆಂಗಳೂರಿನ ಹೇಮಂತ ಗೌಡನ ವಿರುದ್ಧ ರೇಪ್ ಮತ್ತು ದಲಿತ ದೌರ್ಜನ್ಯ ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನೆ ಬೆಂಗಳೂರಿನಲ್ಲಿ ನಡೆದಿರುವುದರಿಂದ ಕೋರ್ಟ್ ಅನುಮತಿ ಪಡೆದು ಪ್ರಕರಣವನ್ನು ಮುಂದಿನ ತನಿಖೆಗಾಗಿ ಮೂಡುಬಿದಿರೆ ಪೊಲೀಸರು ಬೆಂಗಳೂರಿನ ಸೀಗೆಹಳ್ಳಿ ವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗಾಯಿಸಲಿದ್ದಾರೆ.