ಮೂಡುಬಿದಿರೆ ಮೂಲದ ವಿವಾಹಿತೆ, ಪತಿ, ಮಾವ ಕೊಡಗಿನಲ್ಲಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಕೊಡಗು ಜಿಲ್ಲೆಯ ಭಾಗಮಂಡ ಲದಲ್ಲಿ ಮೂಡುಬಿದಿರೆ ಮೂಲದ ವಿವಾಹಿತೆ, ಆಕೆಯ ಪತಿ ಮತ್ತು ಮಾವ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಡುಬಿದಿರೆ ಅಲಂಗಾರಿನ ಮಂಜುಳಾ, ಆಕೆಯ ಪತಿ ಪ್ರದೀಪ್ ಮತ್ತು ಮಾವ ಗೋಪಾಲ್ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಮಂಜುಳಾ ಇಲ್ಲಿನ ಅಲಂಗಾರು ಉಳಿಯಾದ ಅಣ್ಣಿ ಆಚಾರ್ಯ ಎಂಬವರ ಪುತ್ರಿ. 8 ತಿಂಗಳ ಹಿಂದೆ ಈಕೆಯನ್ನು ಕೊಡಗು ಜಿಲ್ಲೆಯ ಭಾಗಮಂಡಲಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಗಂಡನ ಮನೆಯಲ್ಲಿ ನಾದಿನಿ ಮತ್ತು ಅತ್ತೆಯ ಕಿರುಕುಳದಿಂದ ಈಕೆ ಮಾನಸಿಕವಾಗಿ ನೊಂದಿದ್ದಳೆನ್ನಾಗಿದೆ. ಮಂಜುಳಾ, ಆಕೆಯ ಪತಿ ಮತ್ತು ಮಾವ ಒಂದು ಮನೆಯಲ್ಲಿ ವಾಸವಾಗಿದ್ದರೆ ಆಕೆಯ ಅತ್ತೆ ಮತ್ತು ನಾದಿನಿ ಇನ್ನೊಂದು ಮನೆಯಲ್ಲಿ ವಾಸವಾಗಿದ್ದರು. ಅತ್ತೆ, ನಾದಿನಿ ನೀಡುತ್ತಿದ್ದ ಕಿರುಕುಳದ ವಿಷಯವನ್ನು ಆಕೆ ತನ್ನ ತವರುಮನೆಯಲ್ಲಿ ತಿಳಿಸಿದ್ದಳೆನ್ನಲಾಗಿದೆ.

ಮೇ 12ಕ್ಕೆ ಪತಿ ಮನೆಯಲ್ಲಿ ದೇವರಪೂಜೆ ಕಾರ್ಯಕ್ರಮವಿದ್ದು, ಈ ವಿಷಯದಲ್ಲಿ ಅತ್ತೆ, ನಾದಿನಿ ಮತ್ತು ಸೊಸೆ ಮಧ್ಯೆ ಮಂಗಳವಾರ ವಿವಾದ ಉಂಟಾಯಿತ್ತೆನ್ನಲಾಗಿದೆ. ಇದರಿಂದ ಬೇಸತ್ತು ಅದೇ ದಿನ ಮಂಜುಳ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯ ಗೊತ್ತಾಗಿ ಮಂಜುಳಾರ ಪತಿ ಆತ್ಮಹತ್ಯೆಗೆ ಶರಣಾದರೆ ಮಗ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ತಿಳಿದು ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡರೆನ್ನಲಾಗಿದೆ. ಸೊಸೆಗೆ ಅತ್ತೆ ಮತ್ತು ನಾದಿನಿ ನೀಡುತ್ತಿದ್ದ ಕಿರುಕುಳಕ್ಕೆ 3 ಜೀವ ಬಲಿಯಾಗಿದೆ.