ಪೊಲೀಸ್ ಬಲಪ್ರಯೋಗದಲ್ಲಿ ಮೂಡುಬಿದಿರೆ ಪೇಟೆ ಸ್ಥಳಾಂತರ

ಹಲವರ ಬಂಧನ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ವ್ಯಾಪಾರಿಗಳ ಹಾಗೂ ಸ್ವರಾಜ್ಯ ಮೈದಾನ ಉಳಿಸಿ ಹೋರಾಟಗಾರರ ವಿರೋಧದ ಮಧ್ಯೆ ಪುರಸಭೆ ದಿನವಹಿ ಮಾರುಕಟ್ಟೆಯನ್ನು ಪೊಲೀಸ್ ಬಲಪ್ರಯೋಗದಲ್ಲಿ ಸೋಮವಾರ ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರಿಸಲಾಯಿತು.

ಮಾರುಕಟ್ಟೆ ಸ್ಥಳಾಂತರವನ್ನು ವಿರೋಧಿಸಿ ಕರಿಪತಾಕೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಹೋರಾಟ ಸಮಿತಿಯ ಪ್ರಮುಖರಾದ ಚೇತನ್ ಕುಮಾರ್ ಶೆಟ್ಟಿ, ಸೋಮನಾಥ ಕೋಟ್ಯಾನ್, ಗೋಪಾಲ ಶೆಟ್ಟಿಗಾರ್, ಅಮರ್ ಕೋಟೆ, ರಾಹುಲ್, ಹರೀಶ್, ರಾಜೇಶ್ ದೇವಾಡಿಗ ಮತ್ತು ರಕ್ಷಿತ್ ಇವರನ್ನು ಪೊಲೀಸರು ಬಂಧಿಸಿ ಹೇಳಿಕೆ ಪಡಕೊಂಡು ನಂತರ ಬಿಡುಗಡೆ ಮಾಡಿದರು.

ತಾತ್ಕಾಲಿಕ ಮಾರುಕಟ್ಟೆ ಸ್ವರಾಜ್ಯ ಮೈದಾನಕ್ಕೆ ವ್ಯಾಪಾರಿಗಳು ಸ್ಥಳಾಂತರಗೊಳ್ಳಲು ಸೋಮವಾರ ಕಡೇ ದಿನವಾದರು ಈಗಿರುವ ವ್ಯಾಪಾರಿಗಳಿಗೆ ಹೊಸ ಮಾರುಕಟ್ಟೆಯಲ್ಲಿ ಅಂಗಡಿ ಕೋಣೆಗಳನ್ನು ನೀಡುತ್ತೇವೆ ಎನ್ನುವುದನ್ನು ಪುರಸಭೆ ಲಿಖಿತವಾಗಿ ನೀಡದಿದ್ದದ್ದು ಹಾಗೂ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ಸ್ವರಾಜ್ಯ ಮೈದಾನದಲ್ಲಿ ಮಿಲಿಟ್ರಿಗೆ ಸೇರಿದ ಜಾಗವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದ್ದು ಕಾನೂನುಬಾಹಿರ. ಹತ್ತು ದಿನಗಳೊಳಗೆ ಸದ್ರಿ ಜಾಗದ ಆರ್ಟಿಸಿಯನ್ನು ಮಿಲಿಟ್ರಿ ಹೆಸರಿಗೆ ಮರು ದಾಖಲಿಸಬೇಕೆಂದು ಡಿಫೆನ್ಸ್ ಎಸ್ಟೇಟ್ಸ್ ಕಚೇರಿ ಕರ್ನಾಟಕ ಸರ್ಕಲ್ ಮಂಗಳೂರು ಇಲ್ಲಿನ ಅಧಿಕಾರಿ ಮಂಗಳೂರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ ಪತ್ರ ಭಾನುವಾರ ರಾತ್ರಿ ವ್ಯಾಪಾರಿಗಳಿಗೆ ಹಂಚಲಾಗಿದ್ದು, ಇವು ಗೊಂದಲಕ್ಕೆ ಕಾರಣವಾಗಿ ಸ್ಥಳಾಂತರಕ್ಕೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರು.

ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿ ಮಾರ್ಕೆಟ್ ಎದುರಲ್ಲೆ ಪ್ರತಿಭಟನೆ ಕುಳಿತರು. ಪೊಲೀಸರು ಮಾರುಕಟ್ಟೆಯ ಎಲ್ಲ ಪ್ರವೇಶ ದ್ವಾರಗಳಿಗೆ ಬ್ಯಾರಿಕೇಡ್ ಇಟ್ಟು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದರಲ್ಲದೆ, ಮಾರುಕಟ್ಟೆಯೊಳಗೆ ಅಂಗಡಿ ಕೋಣೆಗಳ ಬಾಗಿಲು ತೆರೆಯದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು. ನೀರು, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ವ್ಯಾಪಾರಿಗಳಿಗೆ ಇನ್ನಷ್ಟು ಶಾಕ್ ನೀಡಲಾಯಿತು. ಬಿಜೆಪಿಯ ಕೆಲ ಪುರಸಭೆ ಸದಸ್ಯರು ವ್ಯಾಪಾರಿಗಳಿಗೆ ಬೆಂಬಲ ನೀಡಿದರು.

ವ್ಯಾಪಾರಿಗಳ ಪ್ರತಿಭಟನೆಗೆ ಪುರಸಭೆ ಮಣಿಯದೆ ಪೊಲೀಸ್ ಬಲದೊಂದಿಗೆ ವ್ಯಾಪಾರಿಗಳನ್ನು ಸ್ಥಳಾಂತರಗೊಳಿಸಿದರು. ಬೆಳಿಗ್ಗೆ ಮೀನು ವ್ಯಾಪಾರಿಗಳು ಮೊದಲು ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರಗೊಂಡರು. ಸ್ವಲ್ಪ ಹೊತ್ತು ಪ್ರತಿಭಟನೆ ನಡೆಸಿದ ವ್ಯಾಪಾರಿಗಳು ನಂತರ ಒಬ್ಬೊಬ್ಬರೆ ಸರಕು ಸಾಮಾನುಗಳೊಂದಿಗೆ ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರಗೊಂಡರು. ಮಧ್ಯಾಹ್ನದ ಹೊತ್ತಿಗೆ ಹೆಚ್ಚಿನ ವ್ಯಾಪಾರಿಗಳು ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರಗೊಂಡಿದರಿಂದ ನಂತರ ಪರಿಸ್ಥಿತಿ ಶಾಂತವಾಯಿತು.