ವಿದ್ಯುತ್ ಶಾಕಿನಿಂದ ಮೃತಪಟ್ಟ 2 ಮಂಗಗಳಿಗೆ ಅಂತ್ಯಸಂಸ್ಕಾರ

ಕುಂದಾಪುರ : ಇಲ್ಲಿನ ಚರ್ಚ್ ರಸ್ತೆ ಬಳಿ ಇರುವ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಎರಡು ಮಂಗಗಳು ಸಾವನ್ನಪ್ಪಿದ್ದು, ಅವುಗಳ ಮೃತದೇಹಗಳನ್ನು ಸ್ಥಳೀಯರು ಸಕಲ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಿದ್ದಾರೆ.ಮರದಿಂದ ನೆಗೆದು ಹಾರುವ ಸಂದರ್ಭದಲ್ಲಿ ಎರಡು ಮಂಗಗಳು ಹೈಟೆನ್ಶನ್ ವಿದ್ಯುತ್ ತಂತಿಗೆ ಸಿಲುಕಿ ಒಂದು ಗಂಡು ಹಾಗೂ ಒಂದು ಹೆಣ್ಣು ಮಂಗ ಸಾವನ್ನಪ್ಪಿದ್ದವು. ಇದನು ನೋಡಿದ ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇದಿ ಮೆಸ್ಕಾಂಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದರು. ಬಳಿಕ ಸ್ಥಳೀಯರ ನೆರವಿನೊಂದಿಗೆ ಹೂವಿನ ಮಾರುಕಟ್ಟೆಯ ವ್ಯಾಪಾರಸ್ಥರೆಲ್ಲರೂ ಕೂಡಿಕೊಂಡು ಮಂಗಗಳನ್ನು ಕಂಬದಿಂದ ಕೆಳಕ್ಕೆ ಇಳಿಸಿ ಅವುಗಳಿಗೆ ಸ್ನಾನ ಮಾಡಿಸಿ, ಹೂವಿನ ಹಾರ ಹಾಕಿ, ಮೆರವಣಿಗೆಯಲ್ಲಿ ಕರೆದೊಯ್ದು, ಪಕ್ಕದ ಬೋರ್ಡ್ ಶಾಲೆ ಬಳಿ ಇರುವ ರಿಕ್ಷಾ ನಿಲ್ದಾಣದ ಬಳಿ ಸಕಲ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಿದರು.