ಅಮ್ಮನೇ ಶತ್ರುವಂತೆ ವರ್ತಿಸುತ್ತಿದ್ದಾಳೆ

ನಿಮ್ಮ ಅಕ್ಕನನ್ನು ನೋಡಲು ಬಂದವರು ನಿಮ್ಮನ್ನು ಇಷ್ಟಪಡುತ್ತಿರುವುದರಿಂದ ಅವಳ ಮದುವೆ ಆಗದಿರುವುದಕ್ಕೆ ನೀವೇ ಕಾರಣ ಅಂತ ಆಕೆ ತಿಳಿದು ನಿಮ್ಮ ಮೇಲೆ ಹರಿಹಾಯುತ್ತಿರಬಹುದು.

ಪ್ರ : ನನಗೆ ದೈವದತ್ತವಾದ ಸೌಂದರ್ಯವಿದೆ. ನಾನು ಎಲ್ಲೇ ಹೋಗಲಿ ಅನೇಕರ ದೃಷ್ಟಿ ಸೆಳೆಯುವ ಪರ್ಸನಾಲಿಟಿ ನನಗಿದೆ. ಹುಡುಗರಂತೂ ಬಹುಬೇಗನೇ ಆಕರ್ಷಿತರಾಗಿ ನನ್ನ ಅಟೆನ್ಷನ್ ಸೆಳೆಯಲು ಕಸರತ್ತು ನಡೆಸುತ್ತಿರುತ್ತ್ತಾರೆ. ನಾನು ಅದನ್ನೆಲ್ಲ ನಿರ್ಲಕ್ಷಿಸುತ್ತಿದ್ದೇನೆ. ಆದರೆ ನನ್ನ ಅಮ್ಮ ನನ್ನ ಜೊತೆಗಿದ್ದರೆ ಹುಡುಗರು ನನ್ನ ನೋಡಿ ಮಂಗಚೇಷ್ಟೆ ಮಾಡಲು ಶುರುವಿಟ್ಟುಕೊಂಡರೆ ರಂಪಾಟ ಮಾಡಿ ಸೀನ್ ಕ್ರಿಯೇಟ್ ಮಾಡಿಬಿಡುತ್ತಾಳೆ. ನಾನು ಅವಳಿಗೆ ಹೇಳಲು ಹೋದರೆ `ನೀನೇ ಬೇಕಂತೆ ಅವರನ್ನು ಸೆಳೆಯಲು ಪ್ರಯತ್ನಿಸುತ್ತೀ’ ಅಂತ ಚೀಪಾಗಿ ಮಾತಾಡುತ್ತಾಳೆ. ಅವಳು ನಾನು ವೇಶ್ಯಾವಾಟಿಕೆ ಮಾಡುತ್ತಿದ್ದಿನೇನೋ ಅನ್ನುವ ರೀತಿಯಲ್ಲಿ ಒಮ್ಮೊಮ್ಮೆ ನನ್ನನ್ನು ಬೈಯುತ್ತಾಳೆ. ಆದರೆ ನಾನು ಮುಖಕ್ಕೆ ಸ್ವಲ್ಪವೂ ಮೇಕಪ್ ಮಾಡುವುದಿಲ್ಲ. ಗಮನಸೆಳೆಯುವ ಡ್ರೆಸ್ಸನ್ನೂ ತೊಡುವುದಿಲ್ಲ. ಆದರೂ ಅಮ್ಮ ಈ ರೀತಿ ಮಾತಾಡುವುದು ನನಗೆ ತುಂಬಾ ನೋವುಂಟುಮಾಡುತ್ತಿದೆ. ನನ್ನ ಅಕ್ಕ ನೋಡಲು ಸಾಧಾರಣ ರೂಪಿನವಳು. ಅವಳನ್ನು ನೋಡಲು ಬಂದ ಹುಡುಗರು ನನ್ನನ್ನು ಮದುವೆಯಾಗಲು ಬಯಸುತ್ತಾರೆ. ಅಂತಹ ಸಮಯದಲ್ಲಿ ಅಮ್ಮ ಯಾರು ಇದ್ದಾರೆ ಅಂತಲೂ ನೋಡದೇ ನನ್ನನ್ನು ಹೀಯಾಳಿಸಿ ಮಾತಾಡುತ್ತಾಳೆ. ನಾನು ಸುಂದರಳಾಗಿರುವುದು ನನ್ನ ತಪ್ಪೇ?

: ನಿಮ್ಮ ಸ್ವಂತ ತಾಯಿಯೇ ನಿಮ್ಮ ಹತ್ತಿರ ಈ ರೀತಿ ವರ್ತಿಸುವುದು ಆಶ್ಚರ್ಯ ತರಿಸುತ್ತಿದೆ. ನೀವು ಕಿರಿಯ ಮಗಳಾದ್ದರಿಂದ ಅವರು ನಿಮ್ಮ ಮಲತಾಯಿ ಆಗಿರಲಿಕ್ಕಿಲ್ಲ. ಆದರೂ ಅವರು ಈ ರೀತಿ ನಡೆದುಕೊಳ್ಳುವುದು ನೋಡಿದರೆ ಮನಸ್ಸಿನಲ್ಲಿ ಅವರು ಯಾವುದೋ ರೀತಿಯ ಅಸುರಕ್ಷತೆ ಭಾವನೆಯಿಂದ ನರಳುತ್ತಿದ್ದಾರೆ ಅನಿಸುತ್ತಿದೆ. ತಮ್ಮ ಮಗಳು ಸರಳ ಉಡುಪಿನಲ್ಲೂ ಮೇಕಪ್ ಇಲ್ಲದೇ ಎದ್ದುಕಾಣುವ ಸೌಂದರ್ಯ ಹೊಂದಿರುವ ಬಗ್ಗೆ ಅವರಿಗೆ ಹೆಮ್ಮೆ ಇರಬೇಕಿತ್ತು. ಬಹುಶಃ ಹಿರಿಯ ಮಗಳ ಮದುವೆ ಆಗದಿರುವ ನೋವೇ ಅವರ ಈ ರೀತಿಯ ನಡೆವಳಿಕೆಗೆ ಕಾರಣವಿರಬಹುದು. ನಿಮ್ಮ ಅಕ್ಕನನ್ನು ನೋಡಲು ಬಂದವರು ನಿಮ್ಮನ್ನು ಇಷ್ಟಪಡುತ್ತಿರುವುದರಿಂದ ಅವಳ ಮದುವೆ ಆಗದಿರುವುದಕ್ಕೆ ನೀವೇ ಕಾರಣ ಅಂತ ಆಕೆ ತಿಳಿದು ನಿಮ್ಮ ಮೇಲೆ ಹರಿಹಾಯುತ್ತಿರಬಹುದು.  ನೀವೇನು ನಿಮ್ಮ ಅಕ್ಕನ ಶತ್ರುವಲ್ಲ. ಇನ್ನು ಮುಂದೆ ಅಕ್ಕನನ್ನು ನೋಡಲು ವರ ಬಂದರೆ ಅವರ ಎದುರೇ ಸುಳಿಯಬೇಡಿ ಅಂತ ಹೇಳಬಹುದು. ಆದರೆ ಅದು ಸಮಸ್ಯೆಗೆ ಪರಿಹಾರವಲ್ಲ. ಯಾಕೆಂದರೆ ಮುಂದೆ ಅಕ್ಕನಿಗೆ ಮದುವೆ ನಿಶ್ಚಯವಾದ ನಂತರವಾದರೂ ನೀವು ಕಾಣಿಸಿಕೊಳ್ಳಲೇ ಬೇಕಲ್ಲಾ. ಅಂತಹ ಚಂಚಲ ಪ್ರವೃತ್ತಿಯ ಹುಡುಗರು ನೀವಂತಲ್ಲ ಯಾವ ಚೆಂದದ ಹುಡುಗಿಯನ್ನು ನೋಡಿದರೂ ಹಿಂದೆಬೀಳುವವರೇ. ನಿಮ್ಮ ತಂದೆಗಾದರೂ ನಿಮ್ಮ ಪರಿಸ್ಥಿತಿ ಅರ್ಥವಾಗಿ ಹೆಂಡತಿಗೆ ಬುದ್ಧಿ ಹೇಳಬಹುದಿತ್ತು. ಅವರಿಗದು ಅರ್ಥವಾಗದಿದ್ದರೆ ನಿಮ್ಮ ನೋವನ್ನು ಅವರಿಗೆ ಅರ್ಥಮಾಡಿಸಿ.