ಅವನು ಹೆಚ್ಚು ಕಲಿತಿಲ್ಲ ಅಂತ ಅಮ್ಮನಿಗೆ ಇಷ್ಟವಿಲ್ಲ

ಪ್ರ : ನಾನು ಬಿ.ಕಾಂ ಮೊದಲನೇ ದರ್ಜೆಯಲ್ಲಿ ಪಾಸಾಗಿ ಒಂದು ಫ್ಯಾಕ್ಟರಿಯ ಅಕೌಂಟ್ಸ್ ಸೆಕ್ಷನ್ನಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿಯೇ ಕೆಲಸ ಮಾಡುವ ಮೆಕ್ಯಾನಿಕ್ ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಅವರು ನನ್ನ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಅವರ ಹೆಲ್ಪಿಂಗ್ ಗುಣಕ್ಕೆ ಮಾರು ಹೋದೆ. ಲಂಚ್ ಸಮಯದಲ್ಲಿ ಆಫೀಸಿನ ಮೂಲೆಯೊಂದರಲ್ಲಿ ಕುಳಿತು ಒಬ್ಬರು ಇನ್ನೊಬ್ಬರ ಟಿಫಿನ್ ಹಂಚಿಕೊಳ್ಳುತ್ತಾ ಹರಟುವಾಗ ನಮಗೆ ಸಮಯ ಸರಿದಿದ್ದೇ ಗೊತ್ತಾಗುವುದಿಲ್ಲ. ಯಾರಲ್ಲೂ ಮೂಡದ ಆತ್ಮೀಯತೆ ನನಗೆ ಅವರಲ್ಲಿ ಮೂಡಿದೆ. ಜೀವನಪೂರ್ತಿ ಅವರ ಜೊತೆಯೇ ಬದುಕಬೇಕೆಂದಿದ್ದೇನೆ. ಆದರೆ ನನ್ನ ಈ ನಿರ್ಧಾರಕ್ಕೆ ಅಮ್ಮನ ಸಹಮತವಿಲ್ಲ. ಅದಕ್ಕೆ ಕಾರಣ ಅವರು ಹತ್ತನೇ ತರಗತಿಯವರೆಗೆ ಮಾತ್ರ ಓದಿದ್ದು ಅಂತ. ಆ ಹುಡುಗನೂ ತಾನು ಹೆಚ್ಚು ಓದಿಲ್ಲ ಅಂತ ನನ್ನನ್ನು ಮದುವೆಯಾಗಲು ಹಿಂದೇಟು ಹಾಕಿದರೂ ನನಗೆ ಅವರ ಓದು ಮುಖ್ಯವಲ್ಲ ಅಂತ ಅವರಿಗೆ ಕನ್ವಿನ್ಸ್ ಮಾಡಿದ ನಂತರ ಓಕೆ ಅಂದಿದ್ದಾರೆ. ಅವರ ಹೃದಯ ವೈಶಾಲ್ಯದ ಮುಂದೆ ನನಗೆ ಅವರ ಓದು ನಗಣ್ಯ. ಆದರೆ ಅಮ್ಮನಿಗೆ ತನ್ನ ಪ್ರೆಸ್ಟೀಜೇ ಮುಖ್ಯ. ಅವರ ನೆಂಟರೆಲ್ಲರೂ ಏನಾದರೂ ಹೇಳಬಹುದು ಅನ್ನುವ ಆತಂಕ ಆಕೆಗೆ. ನಮ್ಮಿಬ್ಬರ ಪ್ರೀತಿ ನಿಜವಾದದ್ದು. ನನಗೆ ಅವರೇ ಬೇಕು. ಹೇಗೆ ಮುಂದುವರಿಯಲಿ ನಾನೀಗ?

:  ಹೆಂಡತಿಯೇ ಗಂಡನಿಗಿಂತ ಹೆಚ್ಚು ಓದಿ, ಹೆಚ್ಚು ಸಂಪಾದಿಸುತ್ತಿರುವ ಎಷ್ಟೋ ಉದಾಹರಣೆಗಳು ಇವೆ. ಸುಖಸಂಸಾರಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಿರುವುದು ಗಂಡ-ಹೆಂಡತಿಯ ಮಧ್ಯೆ ಇರುವ ಪರ್ಫೆಕ್ಟ್ ಅಂಡರ್‍ಸ್ಟಾಂಡಿಂಗ್ ಮತ್ತು ಪ್ರೀತಿ. ಒಬ್ಬರು ಇನ್ನೊಬ್ಬರ ಭಾವನೆಯನ್ನು ಅರ್ಥಮಾಡಿ ಕೊಂಡು ಗೌರವಿಸಿದರೆ ಆಗ ಯಾವ ಸಮಸ್ಯೆಯೂ ಇರುವುದಿಲ್ಲ. ಹುಡುಗ ಕಡಿಮೆ ಓದಿದ್ದಕ್ಕಿಂತ ಹೆಚ್ಚಾಗಿ ತಾನು ಕಡಿಮೆ ಓದಿದ್ದೇನೆ ಅನ್ನುವ ಕೀಳರಿಮೆ ಹುಡುಗನಿಗೆ ಇದ್ದರೆ ಅಲ್ಲಿ ಸಮಸ್ಯೆ ಬರುವುದು ಹೆಚ್ಚು. ಪ್ರೀತಿಯ ಮತ್ತಿನಲ್ಲಿ ಮದುವೆಯಾದರೂ ಕೊನೆಗೆ ಮಾತುಮಾತಿಗೆ ಹೆಂಡತಿ ಏನೇ ಹೇಳಿದರೂ ನೀನು ಹೆಚ್ಚು ಓದಿದ್ದೇನೆ ಅಂತ ನಿನಗೆ ಅಹಂಕಾರ ಅಂತ ಹಂಗಿಸಿದರೆ ಆಗ ಹುಡುಗಿಯ ಬಾಳು ನರಕವೇ. ನೀವು ಮದುವೆಯ ಬಗ್ಗೆ ಮುಂದುವರಿಯುವುದಕ್ಕೆ ಮೊದಲು ನಿಮ್ಮ ಆ ಹುಡುಗ ಅಂತಹ ಗುಣ ಮುಂದೆಯೂ ತೋರಿಸಲಾರ ಅನ್ನುವುದರ ಬಗ್ಗೆ ನಿಮಗೆ ನಂಬಿಕೆ ಮೂಡಲಿ. ನಿಮಗೂ ಮುಂದೆಂದೂ ತನ್ನ ಗಂಡ ಹೆಚ್ಚು ಓದಿಲ್ಲ ಅನ್ನುವ ಮುಜುಗರ ಉಂಟಾಗಲಿಕ್ಕಿಲ್ಲವೇ? ನಿಮ್ಮ ಪ್ರೀತಿ ಅದೆಲ್ಲವನ್ನೂ ಮೀರಿದ್ದರೆ ಅಮ್ಮನನ್ನು ಹೇಗಾದರೂ ಒಪ್ಪಿಸಲು ನೋಡಿ. ಎಲ್ಲರಿಗಿರುವಂತೆ ಅವರಿಗೂ ಮಗಳು ವಿದ್ಯಾವಂತನನ್ನು ಕೈಹಿಡಿಯಲಿ ಎನ್ನುವ ಆಸೆ ಇರಬಹುದು. ನೀವು ಆ ಹುಡುಗನ ಜೊತೆಯೇ ಸುಖವಾಗಿರುತ್ತೇನೆ ಅಂತ ಹಠಹಿಡಿದರೆ ಮಗಳ ಖುಶಿಗೋಸ್ಕರ ಅವರೂ ಒಪ್ಪಬಹುದು. ಪದವಿ ಪಡೆಯುವುದು ಮುಂದೆಂದಾದರೂ ಪ್ರಯೋಜನಕ್ಕೆ ಬರಬಹುದಾದ್ದರಿಂದ ನಿಮಗೊಂದು ಕಿವಿಮಾತೆಂದರೆ ನಿಮ್ಮ ಹುಡುಗ ಡೈರೆಕ್ಟಾಗಿ ಪದವಿ ಪಡೆಯಬಲ್ಲ ಯುನಿವರ್ಸಟಿಯಲ್ಲಿ ಪ್ರೈವೇಟಾಗಿ ಓದಿ ಡಿಗ್ರಿ ಪಡೆಯುವಂತೆ ಆತನನ್ನು ಪ್ರೋತ್ಸಾಯಿಸಿ.