ಜಿಯೋ ಜಾಹೀರಾತಿಗೆ ಪ್ರಧಾನಿ ಚಿತ್ರ : ಕಂಪೆನಿಗೆ ಕೇವಲ ರೂ 500 ದಂಡ !

 ನವದೆಹಲಿ :  ಅನುಮತಿಯಿಲ್ಲದೆಯೇ ಪ್ರಧಾನಿ ನರೇಂದ್ರ ಮೋದಿಯ ಭಾವಚಿತ್ರವನ್ನು ವೃತ್ತಪತ್ರಿಕೆಗಳಲ್ಲಿ ಹಾಗೂ ಟೀವಿ ವಾಹಿನಿಗಳಲ್ಲಿ ಪ್ರಕಟವಾದ ತನ್ನ ಜಾಹೀರಾತುಗಳಿಗೆ ಉಪಯೋಗಿಸಿದ ತಪ್ಪಿಗೆ ಮುಖೇಶ್ ಅಂಬಾನಿಯ ರಿಲಯನ್ಸ್ ಜಿಯೋ ಕೇವಲ ರೂ 500 ದಂಡ ಪಾವತಿಸಬೇಕಾಗಬಹುದೆಂದು ತಿಳಿದುಬಂದಿದೆ.

ಕೆಲವು ಪ್ರಮುಖ ಲಾಂಛನ ಹಾಗೂ ಹೆಸರುಗಳ ದುರ್ಬಳಕೆಯನ್ನು ತಡೆಯುವ ನಿಟ್ಟಿನಲ್ಲಿರುವ ಕಾನೂನು ನಿಯಮಗಳ ಉಲ್ಲಂಘನೆಗಾಗಿ ವಿಧಿಸುವ ದಂಡ ಮೊತ್ತ ನಗಣ್ಯವೆಂದೇ ಹೇಳಬಹುದು.

ಪ್ರಧಾನಿ ಕಾರ್ಯಾಲಯವು ರಿಲಯನ್ಸ್ ಜಿಯೋ ಜಾಹೀರಾತಿನಲ್ಲಿ ಮೋದಿ ಭಾವಚಿತ್ರ ಉಪಯೋಗಿಸಲು ಯಾವುದೇ  ಅನುಮತಿ ನೀಡಿಲ್ಲ ಎಂದು ಸಂಸತ್ತಿಗೆ ನೀಡಿದ ಲಿಖಿತ ಉತ್ತರವೊಂದರಲ್ಲಿ ವಾರ್ತಾ ಮತ್ತು  ಪ್ರಸಾರ ಖಾತೆಯ ರಾಜ್ಯ ಸಚಿವ ರಾಜವರ್ಧನ್ ಸಿಂಗ್ ರಾಥೋರ್ ಹೇಳಿದ್ದಾರೆ. ಆದರೆ ಈ ಬೆಳವಣಿಗೆ ಬಗ್ಗೆ ರಿಲಯನ್ಸ್ ಜಿಯೋ ಪ್ರತಿಕ್ರಿಯಿಸಿಲ್ಲ.

ಸಂಸ್ಥೆ ಪ್ರಧಾನಿ ಭಾವಚಿತ್ರವನ್ನು ತನ್ನ ಜಾಹೀರಾತುಗಳಿಗೆ ಉಪಯೋಗಿಸಿದೆಯೆಂಬ ವಿಚಾರದ ಬಗ್ಗೆ ಸರಕಾರಕ್ಕೆ ಗೊತ್ತಿತ್ತು ಎಂದು  ಸಮಾಜವಾದಿ ಪಕ್ಷದ ಸಂಸದ ನೀರಜ್ ಶೇಖರ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುವ ಸಂದರ್ಭದಲ್ಲಿ ರಾಥೋರ್ ಒಪ್ಪಿಕೊಂಡಿದ್ದರು.