ಇಸ್ರೇಲಿಗೆ ಮೋದಿ ಭೇಟಿ ರಾಷ್ಟ್ರಹಿತಕ್ಕೆ ಮಾರಕ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈಗೊಳ್ಳಲಿರುವ ಇಸ್ರೇಲ್ ಭೇಟಿಯು ದೇಶದಲ್ಲಿ ಕೆಟ್ಟ ದೂರಗಾಮಿ ಪರಿಣಾಮ ತರುವ ಸಾಧ್ಯತೆ ಹೆಚ್ಚಿದೆ. ಭಾರತದ ಪಾಲಿಗೆ ಈ ಭೇಟಿಯು ದೊಡ್ಡ ರೀತಿಯಲ್ಲಿಮಾರಕವಾಗಲಿದೆ. ಈವರೆಗೆ ದೇಶದ ಯಾವುದೇ ಪ್ರಧಾನ ಮಂತ್ರಿ ಇಸ್ರೇಲ್ ದೇಶಕ್ಕೆ ಭೇಟಿ ನೀಡಿಲ್ಲ. ಮಹಾತ್ಮ ಗಾಂಧಿ, ನೆಹರು, ಪಟೇಲ್, ಅಂಬೇಡ್ಕರ್ ನೇತೃತ್ವದಲ್ಲಿ ಎಲ್ಲಾ ರೀತಿಯ ಕಷ್ಟ-ನಷ್ಟಗಳ ನಡುವೆ ರೂಪುಗೊಂಡ ರಾಷ್ಟ್ರ ನೀತಿಯನ್ನು ಈ ಸರಕಾರವು ಧ್ವಂಸಗೊಳಿಸುವ ಯತ್ನ ಮಾಡುತ್ತಿದೆ. ಕಾಂಗ್ರೆಸ್ ಪಕ್ಷವು ಇದನ್ನು ಸಂಪೂರ್ಣವಾಗಿ ವಿರೋಧ ಮಾಡುತ್ತದೆ.
ಭಾರತವು ಇಸ್ರೇಲ್ ದೇಶವನ್ನು ಯಾವತ್ತೂ ಬೆಂಬಲಿಸಿಲ್ಲ. ಹಿಂದೆ ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ದೇಶವನ್ನು ಸೇರ್ಪಡೆಗೊಳಿಸುವುದನ್ನು ವಿರೋಧಿಸಿ ಭಾರತವು ಮತವನ್ನು ಚಲಾಯಿಸಿದೆ. ಇಸ್ರೇಲ್ ಒಂದು ಆಕ್ರಮಣಕಾರಿ ರಾಷ್ಟ್ರವಾಗಿದೆ. ಪ್ಯಾಲೇಸ್ತಿಯನ್ನರಿಗೆ ಅಚಲವಾಗಿ ಭಾರತವು ನೀಡಿದ ಬೆಂಬಲಕ್ಕೊಂದು ಇತಿಹಾಸವಿದೆ. ಪ್ಯಾಲೇಸ್ತಿಯನ್ನರ ಹೋರಾಟವನ್ನು ಗುರುತಿಸಿರುವ ಮೊದಲ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. ಪ್ಯಾಲೇಸ್ತಿಯನ್ ಜನತೆಯ ಏಕೈಕ ಪ್ರತಿನಿಧಿಯೆಂದು ಪ್ಯಾಲೇಸ್ತಿಯನ್ ವಿಮೋಚನಾ ಸಂಸ್ಥೆ(ಪಿ ಎಲ್ ಓ)ಯನ್ನು ಮಾನ್ಯತೆ ಮಾಡಿರುವ ಅರಬೇತರ ರಾಷ್ಟ್ರಗಳಲ್ಲಿ ಭಾರತವು ಮೊದಲನೆಯ ರಾಷ್ಟ್ರವಾಗಿದೆ.
ನಮ್ಮ ದೇಶಕ್ಕೆ ಕೊಲ್ಲಿ ರಾಷ್ಟ್ರಗಳಿಂದ ಬರುವ ತೈಲದ ಜತೆ ಲಕ್ಷಾಂತರ ಭಾರತೀಯರು ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಾ ಕೋಟಿಗಟ್ಟಲೆ ಹಣವನ್ನು ಸಂಪಾದಿಸಿ ರವಾನಿಸುತ್ತಿರುವ ಬಗ್ಗೆ ಸರಕಾರವು ಮಹತ್ವ ನೀಡದಿರುವುದು ಶೋಚನೀಯವಾಗಿದೆ. ಭಾರತದ ಅನೇಕ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಜತೆ ಇದ್ದು ಅರಬರು ಹೋರಾಟ ಮಾಡಿದ್ದಾರೆ. ಗೋವಾ ವಿಮೋಚನಾ ಸಂದರ್ಭದಲ್ಲಿ ಈಜಿಪ್ಟ್ ದೇಶದ ಅಧ್ಯಕ್ಷರಾದ ಅಬ್ದುಲ್ ನಾಸ್ಸರ್ ಅವರು ದಾಳಿ ಮಾಡಲು ಬಂದ ಪೆರ್ಚ್‍ಗೀಸರ ಹಡಗನ್ನು ಸ್ಯೂಯೆಜ್ ಕಾಲುವೆ ಮೂಲಕ ಬರಲು ಅವಕಾಶ ನೀಡದೆ ಭಾರತಕ್ಕೆ ಮಾಡಿದ ಸಹಕಾರವನ್ನು ಮರೆಯುವಂತಿಲ್ಲ. ಕೊಲ್ಲಿ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ಗೌರವದಿಂದ ಕೆಲಸ ಮಾಡಿ ಬದುಕುತ್ತಿದ್ದಾರೆ. ಮೋದಿಯವರ ಇಸ್ರೇಲ್ ಭೇಟಿಯು ರಾಜಕೀಯ ಆತ್ಮಘಾತಕವೆನ್ನಿಸಲಿದೆ

  • ಪಿ ವಿ ಮೋಹನ್
    ಏಐಸಿಸಿ ಸದಸ್ಯ  ಮಂಗಳೂರು