ಉ ಪ್ರದೇಶದಲ್ಲಿ ಜಾತಿ ಲೆಕ್ಕಾಚಾರ ತಲೆಕೆಳಗೆ ಮಾಡಿದ ಮೋದಿ

ನಿರ್ದಿಷ್ಟ ಜಾತಿ ಸಮುದಾಯಗಳ ಮತಗಳನ್ನೇ ಪ್ರಧಾನವಾಗಿ ಪರಿಗಣಿಸುವುದಾಗಲೀ, ಜಾತಿ ಸಮೀಕರಣದ ನೆಲೆಯಲ್ಲೇ ರಾಜಕೀಯ ವಿಶ್ಲೇಷಣೆ ಮಾಡುವುದಾಗಲೀ ಅಪ್ರಬುದ್ಧ ಎನಿಸುತ್ತದೆ.

  • ದೀಪಂಕರ್ ಗುಪ್ತಾ

ಚುನಾವಣೆಗಳು, ಚುನಾವಣಾ ಸಮೀಕ್ಷೆ , ತಜ್ಞರು, ಪಂಡಿತರು ಮತ್ತು ರಾಜಕಾರಣಿಗಳು ಸದಾ ಚಿಂತಿಸುವ ಒಂದು ವಿದ್ಯಮಾನ ಎಂದರೆ ಜಾತಿ ರಾಜಕಾರಣದ ಸಮೀಕರಣ. ಭಾರತದಲ್ಲಿ ಎಲ್ಲ ಕ್ಷೇತ್ರಗಳನ್ನೂ ಇದು ಆವರಿಸಿದ್ದರೂ ಚುನಾವಣೆಗಳ ಸಂದರ್ಭದಲ್ಲಿ ಇದು ಹೆಚ್ಚು ಮಹತ್ವ ಪಡೆಯುತ್ತದೆ.  ಆದರೆ ಈ ಬಾರಿ ಉತ್ತರಪ್ರದೇಶ ಚುನಾವಣೆಗಳಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಜಾತಿ ಲೆಕ್ಕಾಚಾರ ತಲೆಕೆಳಗಾಗಿತ್ತು. ಯಾದವ ಸಮುದಾಯದ ಪ್ರಾಬಲ್ಯವನ್ನು ಮುರಿಯುವುದರಲ್ಲಿ ಮೋದಿ ಯಶಸ್ವಿಯಾಗಿದ್ದಾರೆ.

ಉತ್ತರ ಪ್ರದೇಶದ ಜನಸಂಖ್ಯೆಯಲ್ಲಿ ಶೇ 11ರಷ್ಟಿರುವ ಯಾದವರು ರಾಜಕೀಯವಾಗಿ ಪ್ರಬಲ ಅಲ್ಲ ಎಂದು ಈ ಚುನಾವಣೆ ನಿರೂಪಿಸಿದೆ. ಯಾದವರು ಶೇ 18ರಷ್ಟಿರುವ ಮಾಯಿನಪುರಿಯಲ್ಲಿ ಸಮಾಜವಾದಿ ಪಕ್ಷ ಗೆಲುವು ಸಾಧಿಸಿದೆ.  ಇಷ್ಟೇ ಜನಸಂಖ್ಯಾ ಪ್ರಮಾಣ ಇರುವ ಘಾಜಿಪುರ ಮತ್ತು ಜೌನ್‍ಪುರದಲ್ಲಿ ಪಕ್ಷ ಸೋತಿದೆ. ಅಂದರೆ ಪ್ರತಿಯೊಬ್ಬ ಯಾದವನೂ ಸಮಾಜವಾದಿ ಪಕ್ಷಕ್ಕೆ ಮತ ನೀಡಿದ್ದಾನೆ ಎಂದು ಹೇಳಲಾಗುವುದಿಲ್ಲ.

ಪಶ್ಚಿಮ ಉತ್ತರಪ್ರದೇಶದಲ್ಲಿ ಶೇ 9ರಷ್ಟು ಜಾಟ್ ಸಮುದಾಯದವರಿದ್ದರೂ ಅದನ್ನು ಜಾಟ್ ಭದ್ರಕೋಟೆ ಎಂದೇ ಗುರುತಿಸಲಾಗಿದೆ. ಕಾರಣ ತಿಳಿದಿಲ್ಲ. ಆದರೂ ಚರಣ್ ಸಿಂಗ್ ಪುತ್ರ ಇಲ್ಲಿ ಸೋಲು ಅನುಭವಿಸಬೇಕಾಯಿತು. ಜಾಟ್ ಸಮುದಾಯವೇ ಹೆಚ್ಚಾಗಿರುವ ಮುಝಫರ್ ನಗರ, ಮೀರತ್, ಸಹರಣಪುರ ಮತ್ತು ಅಗ್ರಾದಲ್ಲೂ ಸಹ ಆರ್ ಎಲ್ ಡಿ ಪಕ್ಷ ಸೋಲು ಅನುಭವಿಸಿದೆ.

ಯಾವುದೇ ಒಂದು ಜಾತಿ ಸಮುದಾಯ ಒಂದು ನಿರ್ದಿಷ್ಟ್ಯ ಪ್ರದೇಶ ಅಥವಾ ಪ್ರಾಂತ್ಯದ ಮೇಲೆ ರಾಜಕೀಯ ಅಧಿಪತ್ಯ ಸಾಧಿಸಲು ಸಾಧ್ಯವಿಲ್ಲ. ಜಾತಿಯ ಮತಗಳೂ ಸಹ ವಿಭಜಿತವಾಗುತ್ತವೆ. ಪ್ರತಿಯೊಂದು ಚುನಾವಣೆಯಲ್ಲೂ ಈ ವಾಸ್ತವವನ್ನು ಕಾಣುತ್ತಲೇ ಇದ್ದೇವೆ. ಬಿಹಾರದಲ್ಲೂ ಕಂಡಿದ್ದೇವೆ. ಅಲ್ಲಿ ರಾಮ್ ವಿಲಾಸ್ ಪಾಸ್ವಾನ್ ಜೊತೆ ಕೈಗೂಡಿಸಿ ಕೆಳಜಾತಿಗಳ ಮತ ಗಳಿಸಲು ಯತ್ನಿಸಿದ ಬಿಜೆಪಿ ಕೈಸುಟ್ಟುಕೊಂಡಿತ್ತು.

ಹಾಗಾಗಿಯೇ ಉತ್ತರಪ್ರದೇಶ ಚುನಾವಣೆಗಳಲ್ಲಿ ಮೋದಿ ತಮ್ಮ ರಣತಂತ್ರವನ್ನು ಬದಲಿಸಿದ್ದಾರೆ. ಬಿಜೆಪಿ ಪ್ರತಿಯೊಂದು ಜಾತಿಗೂ ಪ್ರಾತಿನಿಧ್ಯ ನೀಡಿತ್ತು. ಯಾದವ್, ಬ್ರಾಹ್ಮಣ, ಬನಿಯಾ, ರಜಪೂತ್, ಕುಶವಾ, ಕುರ್ಮಿ, ಶಾಕ್ಯ, ಮುಸಾಹರ್, ದೋಸಾದ್ ಹೀಗೆ ಎಲ್ಲ ಜಾತಿಗಳ ಅಭ್ಯರ್ಥಿಗಳು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಯಾದವ್ ಮತ್ತು ಜಾಟ್ ಸಮುದಾಯಗಳು ಏಕೆ ಬೃಹತ್ ಪ್ರಮಾಣದಲಿ ಕಂಡುಬರುತ್ತಿದ್ದವು ಎಂದರೆ ಎರಡು ದಶಕಗಳ ಹಿಂದೆ ಕೃಷಿ ಆಧರಿತ ಸಮುದಾಯಗಳ ಪೈಕಿ ಈ ಎರಡು ಜಾತಿಗಳೇ ಪ್ರಧಾನ ಸ್ಥಾನಮಾನ ಪಡೆದಿದ್ದವು. ಹೆಚ್ಚು ಸಾಕ್ಷರತೆ ಹೊಂದಿದ್ದವು. ಅತಿ ಹೆಚ್ಚು ಭೂಮಿಯನ್ನೂ ಹೊಂದಿದ್ದವು.  ಪೊಲೀಸ್ ಮತ್ತು ಅಧಿಕಾರಶಾಹಿಯೊಡನೆ ಹೆಚ್ಚಿನ ಸಂಪರ್ಕ ಹೊಂದಿದ್ದವು.

ಏಳು ದಶಕಗಳ ಪ್ರಜಾತಂತ್ರದ ನಂತರ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಭೂ ಸುಧಾರಣೆ, ಮೀಸಲಾತಿ ಮುಂತಾದ ಸವಲತ್ತುಗಳು ಸಾಮಾಜಿಕ ಸ್ಥಿತ್ಯಂತರಗಳನ್ನು ಪಲ್ಲಟಗೊಳಿಸಿವೆ. ಇಂದು ಹೆಚ್ಚು ಭೂಮಾಲೀಕರು ಕಾಣುವುದಿಲ್ಲ. ಸ್ವಂತ ಉಳುಮೆ ಮಾಡುವ ವ್ಯವಸಾಯಿಗಳು ಕಾಣುತ್ತಾರೆ. ಸಾಕ್ಷರತೆ ಮತ್ತು ನಗರೀಕರಣದ ಪರಿಣಾಮ ಜಾಟ್ ಮತ್ತು ಯಾದವ್ ಸಮುದಾಯದಿಂದ ಹೊರತಾದ ಸಮುದಾಯಗಳಲ್ಲಿ ಜಾಗೃತಿ ಮೂಡಿದೆ. ಹಾಗಾಗಿ ನಗರಗಳಲ್ಲಿ ನೌಕರಿ ಗಳಿಸುವುದರಿಂದ ಹಿಡಿದು ಚುನಾವಣೆಗಳಲ್ಲಿ ಸ್ಪರ್ಧಿಸುವವರೆಗೂ ಸಿದ್ಧವಾಗಿದ್ದಾರೆ.

ಈ ಪರಿಸ್ಥಿತಿಯಲ್ಲಿ ನಿರ್ದಿಷ್ಟ ಜಾತಿ ಸಮುದಾಯಗಳ ಮತಗಳನ್ನೇ ಪ್ರಧಾನವಾಗಿ ಪರಿಗಣಿಸುವುದಾಗಲೀ, ಜಾತಿ ಸಮೀಕರಣದ ನೆಲೆಯಲ್ಲೇ ರಾಜಕೀಯ ವಿಶ್ಲೇಷಣೆ ಮಾಡುವುದಾಗಲೀ ಅಪ್ರಬುದ್ಧ ಎನಿಸುತ್ತದೆ. ಮೋದಿ ತಂತ್ರವನ್ನು ಯಾದವ ಮತ್ತು ಒಬಿಸಿ ಹೊರತುಪಡಿಸಿದ ಜಾತಿ ಸಮೀಕರಣ ಎಂದು ಹೇಳುವವರೂ ಇದ್ದಾರೆ. ಆದರೆ ಇದು ವಾಸ್ತವವಲ್ಲ. ಹಾಗಾಗಿ ಚುನಾವಣಾ ಫಲಿತಾಂಶಗಳಲ್ಲಿ ಜಾತಿ ಸಮೀಕರಣವನ್ನು ಅರಸುವುದು ಅಸಂಬದ್ಧ ಎನ್ನಲಡ್ಡಿಯಿಲ್ಲ.