ಮುಸ್ಲಿಂ ಮಹಿಳೆಯರ ಮತ ಗಳಿಸಲು ಮೋದಿ ತಂತ್ರ

ಲಿಂಗ ತಾರತಮ್ಯವನ್ನು ಪ್ರತಿಪಾದಿಸುವ ಅತಿ ಕ್ರೂರ ತಲಾಖ್ ಪದ್ಧತಿಯನ್ನು ನಿಷೇಧಿಸುವ ಕ್ರಮ ದೇಶದ 17 ಕೋಟಿ ಮುಸ್ಲಿಮರ ಪೈಕಿ ಮಹಿಳೆಯರ ಸಹಾನುಭೂತಿ ಗಳಿಸಲು ಎನ್ ಡಿ ಎ ಸರಕಾರಕ್ಕೆ ಸಹಾಯವಾಗಲಿದೆ.

ಹಿಂದೂ ರಾಷ್ಟ್ರೀಯವಾದಿಗಳು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಎಲ್ಲೆಡೆ ಕೇಸರಿ ಬಣ್ಣ ಮೇಳೈಸುತ್ತಿದ್ದ ವೇದಿಕೆಯ ಮೇಲೆ ಉಪಸ್ಥಿತರಿದ್ದ ಪ್ರಧಾನಿ ನರೇಂದ್ರ ಮೋದಿ ಅನಿರೀಕ್ಷಿತ ಹೇಳಿಕೆಯೊಂದನ್ನು ನೀಡಿದ್ದರು. “ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವುದು ಈ ದೇಶದ ಜನತೆಯ ಮತ್ತು ಸರ್ಕಾರದ ಆದ್ಯ ಕರ್ತವ್ಯ” ಎಂದು ಹೇಳುವ ಮೂಲಕ ಸಭಿಕರಲ್ಲಿ ಅಚ್ಚರಿ ಮೂಡಿಸಿದ್ದರು.

ಈಗ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಸ್ಲಾಂ ಧರ್ಮದ ತ್ರಿವಳಿ ತಲಾಖ್ ಪದ್ಧತಿಯನ್ನು ವಿರೋಧಿಸುತ್ತಿದೆ. ಮೂರು ಬಾರಿ ತಲಾಕ್ ಎಂದು ಉಚ್ಛರಿಸುವ ಮೂಲಕ ಪತ್ನಿಯರಿಗೆ ವಿಚ್ಚೇದನ ನೀಡುವ ಕ್ರೂರ ಪದ್ಧತಿ ಇಸ್ಲಾಂ ಧರ್ಮದಲ್ಲಿ ಇಂದಿಗೂ ಪ್ರಚಲಿತವಾಗಿದ್ದು ಈ ಪದ್ಧತಿಯನ್ನು ರದ್ದುಪಡಿಸುವ ಮೂಲಕ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಲು ಮೋದಿ ಸರ್ಕಾರ ಸಜ್ಜಾಗಿದೆ. ಬಿಜೆಪಿ  ಮತ್ತು ನರೇಂದ್ರ ಮೋದಿಯ ಈ ಚಿಂತನೆಯ ಹಿಂದೆ ರಾಜಕೀಯ ಉದ್ದೇಶವೂ ಇದೆ. ತಲಾಖ್ ವಿರೋಧಿಸುವ ಮೂಲಕ ದೇಶದ ಮುಸ್ಲಿಂ ಮಹಿಳೆಯರ ಅನುಕಂಪ  ಗಳಿಸುವುದು ಮತ್ತು ಮೋದಿಯ ಬಗ್ಗೆ ಮುಸ್ಲಿಮರಲ್ಲಿರುವ ಸಂದೇಹಗಳನ್ನು ನಿವಾರಿಸುವುದು ಪಕ್ಷದ ಉದ್ದೇಶವಾಗಿದೆ. ಈಗಾಗಲೇ ಕೆಲವು ಮುಸ್ಲಿಂ ಮಹಿಳಾ ಸಂಘಟನೆಗಳು ಸರಕಾರದ ನಿಲುವಿಗೆ ಸಕಾರಾತ್ಮಕವಾಗಿ ನಿಲುವಿಗೆ ಸ್ಪಂದಿಸಿವೆ.

ಬಿಜೆಪಿಯ ನೀತಿಯಿಂದ ಎರಡು ಪರಿಣಾಮಗಳು ಉಂಟಾಗಬಹುದು. ಒಂದೆಡೆ ಸಮಾಜದ ಮೇಲೆ ಇಸ್ಲಾಂ ಧರ್ಮದ ಪ್ರಭಾವವನ್ನು ತಗ್ಗಿಸುವುದರಿಂದ ಹಿಂದೂ ಬಹುಸಂಖ್ಯಾತರು ಸಂತುಷ್ಟರಾಗಬಹುದು. ಮತ್ತೊಂದೆಡೆ ಮುಸ್ಲಿಂ ಮತದಾರರಲ್ಲಿ ಒಡಕು ಉಂಟಾಗಬಹುದು. ನೋಟು ರದ್ದತಿ ಮತ್ತು ಅಮಾನ್ಯೀಕರಣದಿಂದ ತಮ್ಮ ಸಾರ್ವಜನಿಕ ವರ್ಚಸ್ಸು ಕಳೆದುಕೊಂಡಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಇದು ಸಹಾಯಕವಾಗಬಹುದು. ಆದರೆ 2014ರ ಲೋಕಸಭಾ ಚುನಾವಣೆಗಳಲ್ಲಿ ಶೇ 10ರಷ್ಟು ಮುಸ್ಲಿಂ ಮತದಾರರ ಬೆಂಬಲ ಗಳಿಸಿದ್ದ ಮೋದಿ ಉತ್ತರಪ್ರದೇಶ ಚುನಾವಣೆಗಳಲ್ಲಿ ಎಷ್ಟು ಪ್ರಭಾವ ಬೀರಲು ಸಾಧ್ಯ ಎನ್ನುವುದು ಚರ್ಚಾಸ್ಪದ.

ಶೇ 92ರಷ್ಟು ಮುಸ್ಲಿಂ ಮಹಿಳೆಯರು ತಲಾಕ್ ವಿರೋಧಿಸುವುದರಿಂದ ತಮ್ಮ ಪುರುಷ ಸಮಾಜವನ್ನು ಧಿಕ್ಕರಿಸುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಸಂವಿಧಾನ ತಿದ್ದುಪಡಿ ಮಾಡಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಮೂಲಕ ಬಹುಪತ್ನಿತ್ವಕ್ಕೆ ಅಂತ್ಯ ಹಾಡುವ ನರೇಂದ್ರ ಮೋದಿ ಸರ್ಕಾರದ ಚಿಂತನೆ ಬಹುಶಃ ಉತ್ತರ ಪ್ರದೇಶ ಚುನಾವಣೆಗಳಲ್ಲಿ ರಾಜಕೀಯ ಚರ್ಚೆಯಾಗಿ ಪರಿಣಮಿಸಲಿದೆ. ತ್ರಿವಳಿ ತಲಾಖ್ ನಿಷೇಧಿಸಲು ಮುಸ್ಲಿಂ ಮಹಿಳೆಯೊಬ್ಬರು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿದ್ದು ಮೋದಿ ಸರ್ಕಾರ ತನ್ನ ವಾದವನ್ನು ಮಂಡಿಸಿದೆ. ಆದರೆ ರಾಜಕೀಯ ಅಖಾಡಾದಲ್ಲಿ ಬಿಜೆಪಿ ತನ್ನ ವಾದವನ್ನು ಹೇಗೆ ಮಂಡಿಸುತ್ತದೆ ಮತ್ತು ಮುಸ್ಲಿಂ ಮತದಾರರನ್ನು ಹೇಗೆ ಆಕರ್ಷಿಸುತ್ತದೆ ಎಂದು ಕಾದು ನೋಡಬೇಕಿದೆ.