ಕನ್ನಡ ಅನುವಾದವಿಲ್ಲದ ಮೋದಿ ಭಾಷಣಕ್ಕೆ ಬಿಜೆಪಿಗರಿಂದ ಬೇಸರ

ಬೆಂಗಳೂರು : ಭಾನುವಾರ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರಿಶುದ್ಧ ಹಿಂದಿ ಪ್ರಯೋಗಿಸಿದ್ದರಿಂದ ಬಹುತೇಕ ಬಿಜೆಪಿ ಕಾರ್ಯಕರ್ತರು ಅರ್ಥವಾಗದೆ ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ, ಪ್ರಧಾನಿ ಹಿಂದಿ ಭಾಷಣ ಕನ್ನಡಕ್ಕೆ ತರ್ಜುಮೆ ವ್ಯವಸ್ಥೆ ಇರಲಿಲ್ಲ.

ಮೋದಿ ಭಾಷಣದ ಕೆಲವು ಪ್ರಮುಖ ವಿಷಯಗಳ ಹೂರಣವೇ ಅರ್ಥವಾಗಿಲ್ಲ ಎಂದು ಬಿಜೆಪಿ ಪದಾಧಿಕಾರಿಗಳು ಹೇಳುತ್ತಿದ್ದಾರೆ.

ಹಿಂದಿನ ಪ್ರತಿಯೊಂದು ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕರ ಭಾಷಣದ ಕನ್ನಡ ಅನುವಾದ ಮಾಡಲಾಗುತ್ತಿತ್ತು. ಆದರೆ ಈಗೀಗ ಈ ವ್ಯವಸ್ಥೆ ಕಡಿಮೆಯಾಗಿದೆ. ಇದರಿಂದಲೇ ಜನವರಿಯಲ್ಲಿ ಚಿತ್ರದುರ್ಗಕ್ಕೆ ಆಗಮಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪೇಚಿಗೆ ಸಿಲುಕಿದ್ದರು. ನಂತರ ಅವರು ಮೈಸೂರು ರ್ಯಾಲಿಯಲ್ಲಿ ಕನ್ನಡ ಅನುವಾದಕಾರರ ವ್ಯವಸ್ಥೆ ಮಾಡಿಕೊಂಡಿದ್ದರು.

ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಉತ್ತರ ಪ್ರದೇಶ ಸೀಎಂ ಯೋಗಿ ಆದಿತ್ಯನಾಥರ ಭಾಷಣದ ಕನ್ನಡ ಅನುವಾದ ಮಾಡಿಲ್ಲ. ಕಳೆದ ವರ್ಷ ಬೆಂಗಳೂರಿಗೆ ಆಗಮಿಸಿದ್ದ ಗೃಹ ಸಚಿವ ರಾಜನಾಥ ಸಿಂಗ್ ತನ್ನ ಭಾಷಣ ಕನ್ನಡಕ್ಕೆ ಅನುವಾದಿಸಲು ವ್ಯವಸ್ಥೆ ಮಾಡಿಕೊಂಡಿದ್ದರು.

ಕರ್ನಾಟಕದಲ್ಲಿ ರಾಷ್ಟ್ರೀಯ ನಾಯಕರು ಪರಿಶುದ್ಧ ಹಿಂದಿಯಲ್ಲಿ ಭಾಷಣ ಮಾಡಿದಲ್ಲಿ, ಕನ್ನಡಿಗರ ಪ್ರೀತಿ ಕಳೆದುಕೊಳ್ಳಬೇಕಾಗುತ್ತದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ಸಿಗೂ ಸಮಾನ ಅನ್ವಯವಾಗುತ್ತದೆ. ಹಿಂದಿಯಿಂದ ಅಥವಾ ಇಂಗ್ಲಿಷಿನಿಂದ ಕನ್ನಡಕ್ಕೆ ಭಾಷಣ ಅನುವಾದಗೊಂಡರೆ ಒಳಿತಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಕನ್ನಡ ಅನುವಾದಕಾರರಿಲ್ಲದಿದ್ದರೆ ಕೆಲವು ಮಹತ್ವದ ಹಾಗೂ ಸೂಕ್ಷ್ಮ ವಿಷಯಗಳು ಜನರಿಗೆ ಅರ್ಥವಾಗದೆ ಹೋಗಬಹುದು. ಆದ್ದರಿಂದ ಅನುವಾದ ಅವಶ್ಯ ಎಂದು ರಾಜಕೀಯ ಶಾಸ್ತ್ರಜ್ಞ ಸಂದೀಪ್ ಶಾಸ್ತ್ರಿ ವಿವರಿಸಿದ್ದಾರೆ.

 

LEAVE A REPLY