ಭರವಸೆ ಈಡೇರಿಸಲು ಮೋದಿ ಮೇಲೆ ಒತ್ತಡ

New Delhi: Prime Minister Narendra Modi speaking to the media on the first day of winter session at the Parliament House on Dec. 15, 2017. (Photo: Amlan Paliwal/IANS)
  • ಟಿ ಎನ್ ಸಿ ರಾಜಗೋಪಾಲನ್

ಹೊಸ ವರ್ಷ ಎಂದರೆ ಸಾಕಷ್ಟು ಆಶಾಭಾವನೆಗಳೊಂದಿಗೆ, ಆತಂಕಗಳೊಂದಿಗೆ ಆರಂಭವಾಗುತ್ತದೆ. ಉತ್ತಮ ಆರ್ಥಿಕ ಅಭಿವೃದ್ಧಿಯನ್ನು ಹೊಂದುವ ಆಶಾಭಾವನೆ ಒಂದೆಡೆಯಾದರೆ ಮತ್ತೊಂದೆಡೆ ತೊಡಕುಗಳು ಕಡಿಮೆಯಾಗಲಿ ಎಂಬ ಆಕಾಂಕ್ಷೆಯೂ ಇರುತ್ತದೆ. ಜಾಗತಿಕ ಅನಿಶ್ಚಿತತೆಗಳಿಂದ ಮುಕ್ತವಾಗುವ ಆತಂಕಗಳೂ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರುತ್ತದೆ. ಬಹುತೇಕ ಅರ್ಥಶಾಸ್ತ್ರಜ್ಞರ ಪ್ರಕಾರ ಭಾರತದ ಆರ್ಥಿಕತೆ ಈ ವರ್ಷ ಶೇ 7ರಿಂದ 7.5ರಷ್ಟು ಜಿಡಿಪಿ ಅಭಿವೃದ್ಧಿಯನ್ನು ಹೊಂದಬೇಕಿದೆ. ಕಳೆದ ವರ್ಷ ಶೇ 7ರಷ್ಟು ಪ್ರಗತಿ ಸಾಧಿಸಿತ್ತು. ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ಕಾಯ್ದೆಯ ಅವಸರದ ಅನುಷ್ಟಾನದಿಂದಾದ ತೊಡಕುಗಳು ಕ್ರಮೇಣ ಕಡಿಮೆಯಾಗುತ್ತಿದ್ದರೂ ಆತಂಕಗಳು ದೂರಾಗಿಲ್ಲ. ಮುಂದಿನ ವರ್ಷ ಚುನಾವಣೆ ಇರುವುದರಿಂದ ಸರ್ಕಾರ ಈ ಬಾರಿ ಯಾವುದೇ ತೊಡಕು ಉಂಟುಮಾಡುವ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಸ್ಥಳೀಯ ಬೇಡಿಕೆ ಮತ್ತು ಖಾಸಗಿ ಬಂಡವಾಳ ಹೂಡಿಕೆಯಲ್ಲಿ ಕಳೆದ ವರ್ಷಕ್ಕಿಂತಲೂ ವೃದ್ಧಿಯಾಗುವ ಲಕ್ಷಣಗಳಿವೆ. ಜಾಗತಿಕ ಆರ್ಥಿಕ ಪ್ರಗತಿ ಶೇ 4ರಷ್ಟು ತಲುಪುವ ಆಶಯವಿದ್ದು, ಅಮೆರಿಕದ ಅರ್ಥವ್ಯವಸ್ಥೆ ಉತ್ತಮ ಪ್ರಗತಿ ಸಾಧಿಸುವ ಸಾಧ್ಯತೆಗಳೂ ಹೆಚ್ಚಾಗಿವೆ.

ಏಷಿಯಾ ಖಂಡದಲ್ಲೂ ಉತ್ತಮ ಆರ್ಥಿಕ ಬೆಳವಣಿಗೆಯ ಸೂಚನೆಗಳಿವೆ. ಜಾಗತಿಕ ಅರ್ಥವ್ಯವಸ್ಥೆಯಲ್ಲಿರುವ ಅನಿಶ್ಚಿತತೆಗಳು ಜಾಗತಿಕ ಮಟ್ಟದಲ್ಲಿ ಪದಾರ್ಥಗಳ ಬೆಲೆಗಳಲ್ಲಿ ವ್ಯತ್ಯಯಗಳ ಪರಿಣಾಮವಾಗಿದ್ದು, ಇದರಿಂದ ಬಹುತೇಕ ರಾಷ್ಟ್ರಗಳು ಕಠಿಣ ಹಣಕಾಸು ಮತ್ತು ವಿತ್ತೀಯ ನೀತಿಗಳನ್ನು ಅನುಸರಿಸುವ ಸಾಧ್ಯತೆಗಳಿವೆ. ಏತನ್ಮಧ್ಯೆ ಪಶ್ಚಿಮ ಏಷ್ಯಾ ಮತ್ತು ಪೂರ್ವ ಏಷ್ಯಾಗಳಲ್ಲಿ ರಾಜಕೀಯ ಪಲ್ಲಟಗಳನ್ನು ಅಲ್ಲಗಳೆಯಲಾಗುವುದಿಲ್ಲ. ಒಟ್ಟಾರೆ ಹೇಳುವುದಾದರೆ ಈ ಆತಂಕಕಗಳು ನಿಗೂಢವಾಗಿದ್ದು, ಸಗಟು ಮಾರುಕಟ್ಟೆಯ ಸೂಚನೆಗಳನ್ನು ನೋಡಿದರೆ ಅಭಿವೃದ್ಧಿಯ ಮಟ್ಟ ಹೆಚ್ಚಾಗುವ ಸಾಧ್ಯತೆಗಳೂ ಕಾಣುತ್ತಿವೆ. ಮತದಾರರನ್ನು, ಜನಸಾಮಾನ್ಯರನ್ನು ಅಲಕ್ಷಿಸಲಾಗುವುದಿಲ್ಲ ಎಂಬ ಸಂದೇಶವನ್ನು ಗುಜರಾತ್ ಚುನಾವಣೆಗಳು ಸ್ಪಷ್ಟವಾಗಿ ನೀಡಿವೆ. ದೇಶದ ಅರ್ಥವ್ಯವಸ್ಥೆಯಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗಾವಕಾಶಗಳು ಯುವ ಪೀಳಿಗೆಗೆ ಸಮರ್ಥ ಉದ್ಯೋಗ ಒದಗಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನರೇಂದ್ರ ಮೋದಿ ಸರ್ಕಾರ ತನ್ನ ಆಶ್ವಾಸನೆಗಳನ್ನು ಪೂರೈಸಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಆದಾಯ ಸಂಗ್ರಹದಲ್ಲಿ ಇಳಿಕೆ, ರೈತ ಸಾಲಮನ್ನಾಗೆ ಹೆಚ್ಚಿದ ಆಗ್ರಹ, ರಕ್ಷಣೆ ಮತ್ತು ಮೂಲ ಸೌಕರ್ಯಗಳಿಗೆ ಹೆಚ್ಚಿನ ಅನುದಾನ, ನೇರ ತೆರಿಗೆ ದರಗಳನ್ನು ಜಾಗತಿಕ ಬಂಡವಾಳ ಹೂಡಿಕೆದಾರರಿಗೆ ಅನುಗುಣವಾಗಿ ರೂಪಿಸುವುದು ಇವೇ ಮುಂತಾದ ಸಮಸ್ಯೆಗಳನ್ನು ಸರ್ಕಾರ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ಹೆಚ್ಚಿನ ಕುತೂಹಲ ಮೂಡಿಸಿದ್ದು ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದ ತೀರ್ಮಾನಗಳನ್ನು ಕುತೂಹಲದಿಂದಲೇ ಕಾದುನೋಡಬೇಕಿದೆ.

LEAVE A REPLY