2013ರಲ್ಲಿ ಮೋದಿ `ಆಧಾರ್’ನಲ್ಲಿ ಕಂಡಿದ್ದ ಸಮಸ್ಯೆಯನ್ನು 2017ರಲ್ಲೂ ಸರಿಪಡಿಸಿಲ್ಲ

ಭಾರತದ ಪ್ರಧಾನಿ ಪಟ್ಟದಲ್ಲಿ ಕೂತ ಮೇಲೆ ನರೇಂದ್ರ ಮೋದಿಯವರು ತಮ್ಮದೇ ಮಾತುಗಳನ್ನು ಮರೆತಂತಿದೆ.

ಆಧಾರ್ ಕಾರ್ಡನ್ನು ಕಡ್ಡಾಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಆ ತೀರ್ಪನ್ನು ಅಲಕ್ಷಿಸಿ, ಹಲವು ಯೋಜನೆಗಳು ಮತ್ತು ಸರ್ಕಾರಿ ಸೌಲಭ್ಯ ಪಡೆಯುವ ಆಕಾಂಕ್ಷಿಗಳಿಗೆ ಮಾತ್ರವಲ್ಲದೆ, ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಸಂಪರ್ಕಗಳು ಸೇರಿದಂತೆ ಖಾಸಗಿ ಕ್ಷೇತ್ರದ ಸೇವೆಗಳಿಗೂ ಕಡ್ಡಾಯಗೊಳಿಸಿದೆ. ಆದರೆ ವ್ಯವಸ್ಥೆಯಲ್ಲಿನ ಧೋಷ ಮತ್ತು ಖಾಸಗಿ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಯಾವುದೇ ಪರಿಹಾರವನ್ನೂ ನೀಡಿಲ್ಲ.

ಇದಕ್ಕಿಂತ ಮಿಗಿಲಾಗಿ ಆಧಾರ್ ವ್ಯವಸ್ಥೆಯು ಅಕ್ರಮ ವಲಸಿಗರು ಕಾರ್ಡ್‍ಗಳನ್ನು ಪಡೆಯುವುದನ್ನೂ ಸರಳಗೊಳಿಸಿದೆ. ಆದರೆ ಈ ಸಮಸ್ಯೆಯೆಲ್ಲವನ್ನೂ ಪ್ರಧಾನಿ ಪಟ್ಟಕ್ಕೇರುವ ಮೊದಲೇ ಪ್ರಧಾನಿ ನರೇಂದ್ರ ಮೋದಿ 2013ರಲ್ಲಿಯೇ ನಿರೀಕ್ಷಿಸಿದ್ದರು !

`ಆಧಾರ್ ಎಲ್ಲಾ ಅನುಕೂಲತೆ ಪಡೆಯಲು ಮೂಲವೆಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಸುಪ್ರೀಂಕೋರ್ಟ್ ಈಗ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಆಧಾರ್ ಹೆಸರಿನಲ್ಲಿ ಎಷ್ಟು ಹಣ ವ್ಯರ್ಥ ಮಾಡಲಾಗಿದೆ ಎಂದು ಪ್ರಧಾನಿ ಮನ್‍ಮೋಹನ್ ಸಿಂಗ್ ಉತ್ತರಿಸಬೇಕಿದೆ’ ಎಂದು 2013ರಲ್ಲಿ ನರೇಂದ್ರ ಮೋದಿ ತಮಿಳುನಾಡಿನಲ್ಲಿ ನಡೆದ ಬಿಜೆಪಿ ಯುವ ರ್ಯಾಲಿಯಲ್ಲಿ ಗುಡುಗಿದ್ದರು.

ಸುಪ್ರೀಂ ಕೋರ್ಟ್ ಕೇಳಿದ ಪ್ರಶ್ನೆಗಳಿಗೆ ಏಕೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಸ್ವತಃ ತಾವು ಪ್ರಧಾನಿಗೆ ಪತ್ರ ಬರೆದಿರುವುದಾಗಿಯೂ ಮೋದಿ ರ್ಯಾಲಿಯಲ್ಲಿ ಹೇಳಿದ್ದರು. `ನಾನು ಅವರನ್ನು ಎಚ್ಚರಿಸಿದ್ದೆ. ಜನರಿಗೆ ಆಧಾರ್ ಕಾರ್ಡ್ ಕೊಡುತ್ತಲೇ ಹೋದಲ್ಲಿ ಭಾರತಕ್ಕೆ ಅಕ್ರಮ ವಲಸಿಗರು ನುಗ್ಗುವುದು ಸರಳವಾಗಿಬಿಡುತ್ತದೆ. ನೆರೆಯ ದೇಶಗಳಿಂದ ಜನರು ಭಾರತದೊಳಕ್ಕೆ ಬರುತ್ತಾರೆ ಮತ್ತು ಅಕ್ರಮ ಹಾದಿಗಳಿಂದ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ’ ಎಂದು ಮೋದಿ ಹೇಳಿದ್ದರು.

ಆದರೆ ಭಾರತದ ಪ್ರಧಾನಿ ಪಟ್ಟದಲ್ಲಿ ಕೂತ ಮೇಲೆ ನರೇಂದ್ರ ಮೋದಿಯವರು ತಮ್ಮದೇ ಮಾತುಗಳನ್ನು ಮರೆತಂತಿದೆ.