ಸಹಕಾರಿ ಸಂಘಗಳ ಬಾಗಿಲು ಮುಚ್ಚಲು ಮೋದಿ ಸರಕಾರ ಹುನ್ನಾರ : ಶಿವನಾಥ್

ನಮ್ಮ ಪ್ರತಿನಿಧಿ ವರದಿ

ಪುತ್ತೂರು : “ದೇಶದ ರೈತರ ಬೆನ್ನೆಲುಬಾಗಿರುವ ಸಹಕಾರಿ ಸಂಘಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ. ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ರೈತರು ಸಹಕಾರಿ ಸಂಘಗಳನ್ನೇ ಅಪಾರವಾಗಿ ನೆಚ್ಚಿಕೊಂಡಿದ್ದು, ದುಡ್ಡಿಲ್ಲದ ಕಾರಣ ಈ ಜನ ಸಮಸ್ಯೆಗೆ ಸಿಲುಕಿದ್ದಾರೆ. ಸಹಕಾರಿ ಸಂಘಗಳ ಕತ್ತು ಹಿಸುಕುವ ಕೆಲಸ ನಡೆಯುತ್ತಿದೆ” ಎಂದು ಕಾಂಗ್ರೆಸ್ ಮುಖಂಡ, ಮುಂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು ಆಪಾದಿಸಿದರು.

ಸುದ್ದಿಗಾರರಲ್ಲಿ ಮಾತನಾಡಿದ ರೈ, “ಕೃಷಿ ಸಾಲವಲ್ಲದೆ ತಿಂಗಳಿಗೆ 20ರಿಂದ 30 ಲಕ್ಷದಷ್ಟು ಸಾಲ ಕೊಡುವ ಸಹಕಾರಿ ಸಂಘಗಳಿವೆ. ಅದರೆ ಕಳೆದ 2 ತಿಂಗಳಲ್ಲಿ ಸಾಲವೇ ಹೋಗುತ್ತಿಲ್ಲ. ಸಾಲ ಕೊಡಲು ಹಣವೂ ಇಲ್ಲ. ಮತ್ತೊಂದೆಡೆ ಸಾಲ ಪಾವತಿಯೂ ಸಮರ್ಪಕವಾಗಿ ಆಗುತ್ತಿಲ್ಲ. ಖಾತೆಗಳಿಗೆ ಜಮೆಯೂ ಕಡಿಮೆಯಾಗಿದೆ. ಸಾಲ ಕೊಡಲಾರದ ಸ್ಥಿತಿಗೆ ಸಂಘಗಳು ತಲುಪಿವೆ. ಬೇಕಾದಷ್ಟು ಹಣ ಸಿಗುತ್ತಿದ್ದ ದಿನಗಳು ಹೋಗಿ ಈಗ ವಾರಕ್ಕೆ ಹೆಚ್ಚೆಂದರೆ 25,000 ರೂ ಮಾತ್ರ ಸಂಘಗಳಿಗೆ ಜಿಲ್ಲಾ ಬ್ಯಾಂಕಿನಿಂದ ಸಿಗುತ್ತಿದೆ. ನೋಟು ಅಮಾನ್ಯಕರಣದಿಂದ ದೇಶದ ಉದ್ಧಾರವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದರೆ, ಕಳೆದ 60 ದಿನಗಳಲ್ಲಿ ಎಲ್ಲವೂ ತಲೆ ಕೆಳಗಾಗಿದೆ. ನಮ್ಮ ದೇಶದ ಅರ್ಥ ವ್ಯವಸ್ಥೆ ಹತ್ತು ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ಜಿಡಿಪಿ ಕುಸಿದಿದ್ದರೆ, ಇಂಧನ ಬೆಲೆ ಏರುತ್ತಿದೆ. ಕೇವಲ ಮೂರು ಶೇಕಡಾ ಕಾಳ ಧನಿಕರನ್ನು ಪತ್ತೆ ಮಾಡಲಾಗಿದ್ದು, ಇದಕ್ಕಾಗಿ 97 ಶೇಕಡಾ ಸಾಮಾನ್ಯ ಜನರಿಗೆ ತೊಂದರೆ ನೀಡಲಾಗುತ್ತಿದೆ” ಎಂದರು.

“ಸಣ್ಣ ಪುಟ್ಟ ಸಹಕಾರಿ ಸಂಘಗಳ ಮೇಲೆ ಹೊಡೆತ ನೀಡುತ್ತಿರುವ ಸರಕಾರ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸಹಕಾರಿ ಸಂಘಕ್ಕೆ ನೋಟ್ ಬ್ಯಾನ್ ದಿನವೇ 500 ಕೋಟಿ ಠೇವಣಿ ಇಡಲಾಗಿದ್ದರೂ ಅದರ ಬಗ್ಗೆ ಕ್ರಮ ಕೈಗೊಂಡಿಲ್ಲ. ನೋಟ್ ಬ್ಯಾನ್ ನಂತರ ಜನಾರ್ದನ ರೆಡ್ಡಿ ಮಗಳ ಮದುವೆ ಕೋಟಿಗಟ್ಟಲೆ ಹಣದಲ್ಲಿ ನಡೆಯಿತು. ನಿತಿನ್ ಗಡ್ಕರಿ ಮನೆಯಲ್ಲೂ ಅದ್ದೂರಿ ಮದುವೆ ನಡೆಯಿತು. ಬಡವರು ಮದುವೆಗೆ ಹಣ ಬೇಕಿದ್ದರೆ ಆಮಂತ್ರಣ ಪತ್ರಿಕೆ ತೋರಿಸಬೇಕು. ಆಗಲೂ ಸಿಗುವುದು 2.5 ಲಕ್ಷ. ಹಾಗಾದರೆ ಗಡ್ಕರಿ, ರೆಡ್ಡಿ ಅವರು ಹೇಗೆ ನೂರಾರು ಕೋಟಿ ಖರ್ಚು ಮಾಡಿದರು” ಎಂದು ಪ್ರಶ್ನಿಸಿದರು.

ಯಾರ ಉದ್ಧಾರಕ್ಕೆ ಮೋದಿ ಭಾಷಣ

“ಗ್ಯಾಸ್ ಬುಕ್ಕಿಂಗಿಗೆಂದು ಕರೆ ಮಾಡಿದರೆ ಮೋದಿ ಭಾಷಣ ಮೊದಲು ಪ್ಲೇ ಮಾಡಲಾಗುತ್ತದೆ. ನಂತರ ಇನ್ನೊಂದು ಸ್ವರ ಕೇಳುತ್ತದೆ. ಇದೆಲ್ಲ ಆಲಿಸಿ ಗ್ಯಾಸ್ ಬುಕ್ ಮಾಡಿದರೆ ಆಗ ಮೂರೂವರೆ ರೂ ಕಟ್ ಆಗುತ್ತದೆ. ದೇಶದಲ್ಲಿ ಒಂದು ಕೋಟಿ ಜನ ಗ್ಯಾಸ್ ಬುಕ್ ಮಾಡುವಾಗ ಮೂರೂವರೆ ಕೋಟಿ ರೂ ಮೊಬೈಲ್ ಕಂಪನಿಗಳಿಗೆ ಸಿಗುತ್ತದೆ. ಅಂದರೆ ಕಂಪನಿಗಳನ್ನು ಉದ್ಧಾರ ಮಾಡಲು ನಾವು ಮೋದಿ ಭಾಷಣ ಕೇಳಬೇಕೇ” ಎಂದು ಶಿವನಾಥ ರೈ ಪ್ರಶ್ನಿಸಿದರು.