ಮೋದಿ ಕನಸು ನನಸಾಗದು

ಬೇಬಿ ಶೆಟ್ಟಿ ಮಾತನಾಡುತ್ತಿರುವುದು

ಬೇಬಿ ಶೆಟ್ಟಿ ಭವಿಷ್ಯ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕೇಂದ್ರದ ಮೋದಿ ಸರಕಾರ ನೋಟು ಅಸಿಂಧುಗೊಳಿಸಿದ ಪರಿಣಾಮ ಸಾಮಾನ್ಯ ಜನತೆ ಏನು ಮಾಡಬೇಕೆಂದು ಗೊತ್ತಾಗದ ಸಂದಿಗ್ದ ಸ್ಥಿತಿಯಲ್ಲಿದ್ದಾರೆ. ಸಾಮಾನ್ಯ ಜನತೆಯನ್ನು ಸಂಕಷ್ಟದಲ್ಲಿ ಸಿಲುಕಿಸಿ ನೋಟು ಅಮಾನ್ಯಗೊಳಿಸಿದ ಮರುದಿನವೇ ವಿದೇಶಕ್ಕೆ ತೆರಳಿ ಮೋಜು ಮಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿಯ ಡಿಜಿಟಲ್ ಇಂಡಿಯಾದ ಕನಸು ನನಸಾಗುವುದಿಲ್ಲ. ಇದರಿಂದ ಭಾರತಕ್ಕೆ ಯಾವುದೇ ಲಾಭ ಇಲ್ಲ ಎಂದು ಸಿಪಿಎಂ ಹಿರಿಯ ನೇತಾರೆ ಬೇಬಿ ಶೆಟ್ಟಿ ಹೇಳಿದರು.

ತೂಮಿನಾಡಿನಂತಹ ಗ್ರಾಮೀಣ ಪ್ರದೇಶಕ್ಕೆ ಬೇಕಾಗಿರುವುದು ನೀರಿನಂತಹ ಮೂಲಸೌಕರ್ಯ, ಇಲ್ಲಿಯವರಿಗೆ ಡಿಜಿಟಲ್ ಇಂಡಿಯಾದ ಅಗತ್ಯವಿಲ್ಲ. ಕಪ್ಪು ಹಣವನ್ನು ಬಿಳಿ ಮಾಡಲು ಹೊರಟ ಮೋದಿಯ ವ್ಯಂಗ್ಯ ಕಥೆಗಳು ಧಾರವಾಹಿ ರೀತಿಂ ಪತ್ರಿಕೆಗಳಲ್ಲಿ ಬಿತ್ತರಿಸುತ್ತಿದೆ. ಯಾರೋ ಮಾಡಿದ ತಪ್ಪಿಗೆ ಮೋದಿ ಮುಗ್ದ ಭಾರತೀಯರನ್ನು ಕಷ್ಟದಲ್ಲಿ ಸಿಲುಕಿಸಿದ್ದಾರೆ ಎಂದರು.

ಡಿಸೆಂಬರ್ 29ರಂದು ಕಾಸರಗೋಡಿನಿಂದ ತಿರುವನಂತಪುರದ ತನಕ ಎಲ್ ಡಿ ಎಫ್ ನೇತೃತ್ವದಲ್ಲಿ ನಡೆಯಲಿರುವ ಮಾನವ ಸಂಕೋಲೆ ಚಳವಳಿಯ ಪ್ರಚಾರಣಾರ್ಥ ಎಲ್ ಡಿ ಎಫ್ ಮಂಜೇಶ್ವರ ಪಂಚಾಯತಿ ಕಮಿಟಿ ನೇತೃತ್ವದಲ್ಲಿ ತೂಮಿನಾಡಿನಿಂದ ಆರಂಭಗೊಂಡ ಕಾಲ್ನಡಿಗೆ ಪ್ರಚಾರಣಾ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಜಾಥಾ ಬಳಿಕ ಕುಂಜತ್ತೂರು, ಕಣ್ವತೀರ್ಥ ಸೇರಿದಂತೆ ಹಲವೆಡೆ ಪರ್ಯಟನೆ ನಡೆಸಿ ಬಳಿಕ ಹೊಸಂಗಡಿಯಲ್ಲಿ ಸಮಾಪ್ತಿಗೊಂಡಿತು. ಈ ಸಂದರ್ಭ ನೇತಾರರ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.