ಮೋದಿ ಪದವಿ ವಿವಾದ : ದಾಖಲೆ ಒದಗಿಸುವಂತೆ ಹೇಳಿದ ಮಾಹಿತಿ ಆಯುಕ್ತರ ಅಧಿಕಾರ ಮೊಟಕು

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ತಮ್ಮ ಬಿ ಎ ಪದವಿ ಪಡೆದಿದ್ದಾರೆನ್ನಲಾದ ವರ್ಷವಾದ 1878ರ ದೆಹಲಿ ವಿಶ್ವವಿದ್ಯಾಲಯದ ಬಿಎ ಪದವಿ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲು ವಿಶ್ವವಿದ್ಯಾಲಯ ಅನುಮತಿಸಬೇಕು ಎಂದು ಮಾಹಿತಿ ಆಯುಕ್ತ ಎಂ ಶ್ರೀಧರ ಆಚಾರ್ಯುಲು ಅವರು ಡಿಸೆಂಬರ್ 21ರಂದು ನೀಡಿದ್ದ ಆದೇಶದ ಬಗ್ಗೆ ಪತಿಕಾ ವರದಿಗಳು ಕೆಲ ದಿನಗಳ ಹಿಂದೆ ಪ್ರಕಟವಾಗಿದ್ದೇ ತಡ, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನೂ ಆಚಾರ್ಯ ತಮ್ಮ ಸಹೋದ್ಯೋಗಿ ಮಂಜುಳಾ ಪರಾಶರ್ ಅವರಿಗೆ ಹಸ್ತಾಂತರಿಸಬೇಕು ಎಂಬ ಆದೇಶ ಮುಖ್ಯ ಮಾಹಿತಿ ಆಯುಕ್ತ ಆರ್ ಕೆ ಮಾಥುರ್ ಅವರಿಂದ ಬಂದಿದೆಯೆಂದು ವರದಿಗಳು ತಿಳಿಸುತ್ತವೆ.
ಪ್ರಧಾನಿ ನರೇಂದ್ರ ಮೋದಿಯ ಶೈಕ್ಷಣಿಕ ಅರ್ಹತೆಯ ಬಗ್ಗೆ ಬಿಜೆಪಿ ಹಾಗೂ ಆಮ್ ಆದ್ಮಿ ಪಾರ್ಟಿ ನಡುವೆ ನಡೆಯುತಿರುವ ರಾಜಕೀಯ ಸಮರದಲ್ಲಿ ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಸಿಲುಕಿದ್ದಾರೆಂಬುದು ಈ ಪ್ರಕರಣದಿಂದ ಸ್ಪಷ್ಟ.
1978ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳ ದಾಖಲೆಗಳನ್ನು ಒದಗಿಸುವಂತೆ ಕೋರಿ ನೀರಜ್ ಎಂಬವರು ಸಲ್ಲಿಸಿದ್ದ ಆರ್ಟಿಐ ಅರ್ಜಿಯೊಂದರ ವಿಚಾರಣೆ ನಡೆಸುತಿದ್ದ ಆಚಾರ್ಯುಲು, ಸಂಬಂಧಿಸಿದ ಮಾಹಿತಿ ನೀಡಲು ನಿರಾಕರಿಸಿದ್ದ ದೆಹಲಿ ವಿಶ್ವವಿದ್ಯಾಲಯದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯ ನಿರ್ಧಾರವನ್ನು ತಿರಸ್ಕರಿಸಿದ್ದಾರೆ. “ವರ್ಷ 1978ರ ದೆಹಲಿ ವಿಶ್ವವಿದ್ಯಾಲಯದ ದಾಖಲೆಗಳನ್ನು ಬಹಿರಂಗಪಡಿಸಿದ್ದೇ ಆದಲ್ಲಿ ಅದು ವಿದ್ಯಾರ್ಥಿಗಳ ಖಾಸಗಿತನವನ್ನು ಆಕ್ರಮಿಸಿದಂತೆ ಹಾಗೂ ಈ ಮಾಹಿತಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿಯಿಲ್ಲ” ಎಂದು ವಿಶ್ವವಿದ್ಯಾಲಯ ಹೇಳಿತ್ತು.
ಆದರೆ ಈ ಮಾಹಿತಿ ಹೇಗೆ “ಖಾಸಗಿತನದ ಮೇಲೆ ಆಕ್ರಮಣ”ವಾಗುತ್ತದೆಯೆಂದು ವಿಶ್ವವಿದ್ಯಾಲಯ ವಿವರಿಸಿಲ್ಲ ಎಂದು ವಿಚಾರಣೆ ಸಂದರ್ಭ ಆಚಾರ್ಯುಲು ಹೇಳಿದ್ದರು.
ಮೋದಿಯ ಶೈಕ್ಷಣಿಕ ಅರ್ಹತೆ ವಿಚಾರದಲ್ಲಿ ಬಿಜೆಪಿ ಮತ್ತು ಎಎಪಿ ಹಲವು ಸಮಯದಿಂದ ಕಚ್ಚಾಡುತ್ತಿದ್ದು ಪ್ರಧಾನಿ ಚುನಾವಣೆ ಸಂದರ್ಭ ಸಲ್ಲಿಸಿದ್ದ ಅಫಿಡವಿಟ್ಟಿನಲ್ಲಿ ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ಸುಳ್ಳು ಹೇಳಿರಬೇಕೆಂಬುದು ಎಎಪಿಯ ವಾದವಾಗಿದೆ. ತಮ್ಮ ಪದವಿ ಸಂಬಂಧಿತ ಮಾಹಿತಿಯನ್ನು ಸಂಬಂಧಿತ ಇಲಾಖೆಗಳು ಬಿಡುಗಡೆಗೊಳಿಸದಂತೆ ಮೋದಿ ಅವುಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆಂದೂ ಆರೋಪಿಸಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಮುಖ್ಯ ಮಾಹಿತಿ ಆಯುಕ್ತರಿಗೆ ಪತ್ರ ಬರೆದಿದ್ದರು.
ಈ ಪತ್ರವನ್ನು ಆರ್ಟಿಐ ಅರ್ಜಿ ಎಂದು ಪರಿಗಣಿಸಿದ್ದ ಮುಖ್ಯ ಮಾಹಿತಿ ಆಯುಕ್ತರು ಗುಜರಾತ್ ವಿಶ್ವವಿದ್ಯಾಲಯ ಹಾಗೂ ದೆಹಲಿ ವಿಶ್ವವಿದ್ಯಾಲಯಗಳಿಗೆ ಮೋದಿಯ ರೋಲ್ ನಂಬರ್ ಬಗ್ಗೆ ಮಾಹಿತಿ ನೀಡುವಂತೆ ಆದೇಶಿಸಿದ್ದರು. ನಂತದ ಬೆಳವಣಿಗೆಗಳಲ್ಲಿ ಮೋದಿ ತಮ್ಮ ಬಿ ಎ ಹಾಗೂ ಎಂ ಎ ಪದವಿಗಳನ್ನು ಪೂರ್ತಿಗೊಳಿಸಿದ್ದಾರೆಂದು ಎರಡೂ ವಿಶ್ವವಿದ್ಯಾಲಯಗಳು ಹೇಳಿದ್ದವು. ಮೋದಿಯ ಚುನಾವಣಾ ಅಫಿಡವಿಟ್ಟಿನಲ್ಲಿ ತಿಳಿಸಿದಂತೆ ಅವರು ದೆಹಲಿ ವಿಶ್ವವಿದ್ಯಾಲಯದಿಂದ 1978ರಲ್ಲಿ ಬಿಎ ಪದವಿಯನ್ನು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದರು ಹಾಗೂ ರಾಜಕೀಯ ಶಾಸ್ತ್ರದಲ್ಲಿ ಎಂ ಎ ಪದವಿಯನ್ನು 1983ರಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.
ಬಿಜೆಪಿ ನಾಯಕರುಗಳು ಈ ಪದವಿ ಪ್ರಮಾಣ ಪತ್ರವನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದರೆ ಕೇಜ್ರಿವಾಲ್ ತಂಡ ಅದರಲ್ಲೂ ಸಂಶಯ ವ್ಯಕ್ತಪಡಿಸಿತ್ತಲ್ಲದೆ ಅಂಕ ಪಟ್ಟಿ ಹಾಗೂ ಡಿಗ್ರಿ ಪ್ರಮಾಣಪತ್ರದಲ್ಲಿ ಅಭ್ಯರ್ಥಿಯ ಹೆಸರಿನಲ್ಲಿ ವ್ಯತ್ಯಾಸವಿದೆ ಹಾಗೂ ಮೋದಿ ಅಂತಿಮ ಬಿಎ ಪರೀಕ್ಷೆಯನ್ನು 1977ರಲ್ಲಿ ಬರೆದಿದ್ದರೂ ಪದವಿ ಪ್ರಮಾಣ ಪತ್ರ 1978ರಲ್ಲ ನೀಡಲಾಗಿತ್ತು ಎಂದು ದೂರಿತ್ತು. ಮೋದಿ 1977ರ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರಿಂದ 1978ರಲ್ಲಿ ತೇರ್ಗಡೆಗೊಂಡು ಪದವಿ ಪಡೆದಿದ್ದರು ಎಂದು ಪಕ್ಷ ಹೇಳಿತ್ತು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇತ್ತೀಚಿಗಿನ ಮಾಹಿತಿ ಆಯುಕ್ತರ ಆದೇಶ ಹಾಗೂ ಅವರ ಅಧಿಕಾರ ಮೊಟಕುಗೊಳಿಸುವಿಕೆ ರಾಜಕೀಯ ಮಹತ್ವ ಪಡೆಯುತ್ತಿದೆ.

 

ಕೇಜ್ರಿ ತಿರುಗೇಟು
ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಅವರ ಅಧಿಕಾರ ಮೊಟಕುಗೊಳಿಸಿ ಅವರಿಗೆ ನೀಡಲಾಗಿರುವ `ಶಿಕ್ಷೆ’ ಪ್ರಧಾನಿ ನರೇಂದ್ರ ಮೋದಿಯ ಪದವಿ ಪ್ರಮಾಣಪತ್ರ ನಕಲಿ ಎಂಬುದನ್ನು ಸಾಬೀತು ಪಡಿಸುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. “ಅವರ ಡಿಗ್ರಿ ನಕಲಿ ಎಂದು ಸಾಬೀತಾಗಿದೆಯಲ್ಲವೇ ? ಅವರೇಕೆ ತಮ್ಮ ಶೈಕ್ಷಣಿಕ ಪದವಿಯನ್ನು ಅಡಗಿಸಲು ಯತ್ನಿಸುತ್ತಿದ್ದಾರೆ ?” ಎಂದು ಕೇಜ್ರಿ ಟ್ವೀಟ್ ಮಾಡಿದ್ದಾರೆ.