`ಗುಜರಾತದಲ್ಲಿ ಮೋದಿ, ಶಾ ಇಬ್ಬರೂ ಬಿಜೆಪಿಯ ಪೋಸ್ಟರ್ ಬಾಯ್ಸ್’

ಗುಜರಾತ್ ರಾಜ್ಯದ ಬಿಜೆಪಿ ಸರಕಾರದ ರಿಮೋಟ್ ಕಂಟ್ರೋಲ್ ಕೇಂದ್ರದ ಕೈಯ್ಯಲ್ಲಿದೆ ಎಂಬುದು ಸಾಮಾನ್ಯ ಅಭಿಪ್ರಾಯ. ರಾಜ್ಯದ ಮುಖ್ಯಮಂತ್ರಿ ವಿಜಯ್ ರೂಪಾನಿ ಇದನ್ನು ಅಲ್ಲಗಳೆಯುವುದೂ ಇಲ್ಲ. ಸರಕಾರ ಅನುಸರಿಸುವ ನೀತಿಯ ವಿಚಾರಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ 13 ವರ್ಷ ಕಾರ್ಯನಿರ್ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಬಳಿ ಚರ್ಚಿಸುವುದರಲ್ಲಿ ಏನೂ ತಪ್ಪು ಕಾಣಿಸದು ಎಂದು ಹೇಳುತ್ತಾರೆ ರೂಪಾನಿ. ಅವರೊಂದಿಗಿನ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.

  • ಚುನಾವಣೆಗಳು ಸಮೀಪಿಸುತ್ತಿವೆ… ನೀವು ಪಕ್ಷದ ಮುಖವಾಗಲಿದ್ದೀರಾ ?                      

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮುಂದಿನ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಪಕ್ಷದ ಪೋಸ್ಟರ್ ಬಾಯ್ಸ್ ಆಗಲಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ. ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಜನಪ್ರಿಯ ನಾಯಕರನ್ನು ಪ್ರಚಾರಕ್ಕಿಳಿಸಿ ಜನರ ಮನಸ್ಸನ್ನು ಗೆಲ್ಲಲು ಯತ್ನಿಸುತ್ತವೆ. ಮೋದಿ ಭಾಯ್ ಹಾಗೂ ಅಮಿತ್ ಭಾಯ್ ಈ ದೇಶದ ಅತ್ಯಂತ ಜನಪ್ರಿಯ ನಾಯಕರು.

  • ಕಳೆದೊಂದು ವರ್ಷದ ಅವಧಿಯಲ್ಲಿ ನಿಮ್ಮ ಸರಕಾರದ ಕಾರ್ಯನಿರ್ವಹಣೆ ಹೇಗಿತ್ತು ?

ಕಳೆದ 16 ವರ್ಷಗಳಿಂದ ರಾಜ್ಯದಲ್ಲಿ ಆಡಳಿತವಿರುವ ಬಿಜೆಪಿ ಸರಕಾರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ನರೇಂದ್ರ ಭಾಯ್ ಅವರ ಯಶಸ್ವೀ ನಾಯಕತ್ವದಲ್ಲಿ ಗುಜರಾತ್ ಅಭಿವೃದ್ಧಿಯ ಶಕೆ ಆರಂಭವಾಯಿತು. ಈ ಅಭಿವೃದ್ಧಿಯ ಪಥವನ್ನು ಆನಂದಿಬೆನ್ ಪಟೇಲ್  ಸರಕಾರ ಮುಂದುವರಿಸಿಕೊಂಡು ಹೋದರೆ ಈಗ ನನ್ನ ಸರಕಾರ ಆ ಕಾರ್ಯ ಮಾಡುತ್ತಿದೆ.  ನರೇಂದ್ರ ಭಾಯ್ ಅವರ ಸಮರ್ಥ ಆಡಳಿತದಿಂದಲೇ ಬಿಜೆಪಿ ರಾಜ್ಯದಲ್ಲಿ ಯಶಸ್ವಿಯಾಗಿದೆ. ಮಳೆ ಅಭಾವದ ಹೊರತಾಗಿಯೂ ಗುಜರಾತ್ ಇಂದು ಪ್ರಗತಿ ಸಾಧಿಸಿದೆ. ಕೃಷಿ ಕ್ಷೇತ್ರದಲ್ಲಿ ನಮ್ಮ ಅಭಿವೃದ್ಧಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ.

  • ಆದರೂ ನೀವು ಕೃಷಿ ಮತ್ತು ಸಾಮಾಜಿಕ ವಲಯಗಳಲ್ಲಿ ವಿಫಲರಾಗಿದ್ದೀರೆಂದು ಕಾಂಗ್ರೆಸ್ ಆಪಾದಿಸುತ್ತಿದೆಯಲ್ಲ ?

ನಾವು ಈ ಎರಡು ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದೇವೆಂದು ಅವರು ಒಪ್ಪಿಕೊಂಡಿದ್ದಾರೆಂಬುದೇ ಇದರ ಅರ್ಥ. ಕಾಂಗ್ರೆಸ್ ಪಕ್ಷ ಮತ್ತದರ ನಾಯಕರುಗಳು ಜನರ ಜತೆ ಸಂಪರ್ಕವನ್ನೇ ಸಾಧಿಸಿಲ್ಲ.

  • ಪಟೇಲ್ ಸಮುದಾಯ ನಿಮ್ಮ ವಿರುದ್ಧ ಸಮರ ಸಾರಿದೆ. ಇದರಿಂದ ನಿಮ್ಮ ಪಕ್ಷಕ್ಕೆ ಪ್ರತಿಕೂಲ ವಾತಾವರಣ ಸೃಷ್ಟಿಯಾಗದೇ ?

ಚುನಾವಣೆ ಸಂದರ್ಭ ಈ ವಿಚಾರ ಪ್ರಸ್ತುತವಲ್ಲ. ಈ ಚಳುವಳಿಯಲ್ಲಿನ ಕಾವು ಕಡಿಮೆಯಾಗಿದೆ.  ನಾವು ಅವರಿಗಾಗಿ ಸಮುದಾಯದ ಯುವಜನತೆಗೆ ಆರ್ಥಿಕ ಸಹಾಯ ಒದಗಿಸುವ  ಮುಖ್ಯಮಂತ್ರಿ ಸ್ವಾವಲಂಬನ್ ಯೋಜನಾ ಸಹಿತ ಹಲವು ಯೋಜನೆಗಳನ್ನು ಘೋಷಿಸಿದ್ದೇವೆ.

  • ರಾಜ್ಯಕ್ಕೆ ಕೇಜ್ರಿವಾಲರ ಎಎಪಿಯ ಆಗಮನ ಅಥವಾ ತೃತೀಯ ರಂಗದ ಸ್ಥಾಪನೆ ಪ್ರಸ್ತಾಪದ ಬಗ್ಗೆ ಏನಂತೀರಿ ?

ಅವರಿಗೆ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವಾಗತವಿದೆ. ಆದರೆ ಅವರಿಗೆ ಸೋಲು ಕಾದಿದೆ. ಗುಜರಾತ್ ರಾಜ್ಯದ ಜನರು ತೃತೀಯ ರಂಗವನ್ನು ಒಪ್ಪಲು ಸಾಧ್ಯವಿಲ್ಲ. ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ.

  • ಜನರು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿ ಸಸ್ಯಾಹಾರಿಗಳಾಗಬೇಕು ಎಂದು ನೀವು ಒಮ್ಮೆ ಹೇಳಿದ್ದಿರಿ. ಈ ನಿಟ್ಟಿನಲ್ಲಿ ಏನಾದರೂ ಶಾಸನ ಜಾರಿಗೊಳಿಸುವ ಉದ್ದೇಶವಿದೆಯೇ ?

ಹೌದು, ನಾನು ಹಾಗೆ ಹೇಳಿದ್ದೆ. ಜಗತ್ತಿನಲ್ಲೀಗ ಹೆಚ್ಚು ಹೆಚ್ಚು ಜನರು ಸಸ್ಯಾಹಾರಿಗಳಾಗುತ್ತಿದ್ದಾರೆ. ಆದರೆ ಸಸ್ಯಾಹಾರಿಯಾಗಬೇಕೆಂದು ಯಾರನ್ನೂ ಒತ್ತಾಯಿಸುವ ಪ್ರಶ್ನೆಯೇ ಇಲ್ಲ. ಯಾವುದೇ ಶಾಸನ ಜಾರಿಗೆ ತರುವ ಉದ್ದೇಶವೂ ನಮಗಿಲ್ಲ.

  • ದಲಿತರ ಮೇಲೆ ಗೋಹತ್ಯೆ ವಿಚಾರದಲ್ಲಿ ದಾಳಿಯಿಂದಾಗಿ ನಿಮ್ಮ ರಾಜ್ಯ ಸುದ್ದಿಯಾಗಿತ್ತು. ಗೋಹತ್ಯೆ ನಿಷೇಧಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ?

ರಾಜ್ಯದಲ್ಲಿ ಗೋ ಹತ್ಯೆ ನಡೆಸುವವರಿಗೆ ಜೀವಾವಧಿ ಶಿಕ್ಷೆಯಿದೆ. ನಾವು ಹುಕ್ಕಾ ಬಾರುಗಳನ್ನೂ ಬಂದ್ ಮಾಡಿದ್ದೇವೆ. ಇಲ್ಲಿ ಕಠಿಣ ಮದ್ಯಪಾನ ವಿರೋಧಿ ನಿಯಮಗಳಿವೆ. ಮದ್ಯ ನಿಷೇಧವನ್ನು ಉಲ್ಲಂಘಿಸಿದವರಿಗೆ ಕೂಡ ಜೀವಾವಧಿ ಶಿಕ್ಷೆಯಿದೆ.

  • ಅಮಿತ್ ಶಾ ಅವರ ಗುರಿಯಾದ ಒಟ್ಟು 182 ಸ್ಥಾನಗಳಲ್ಲಿ ನಿಮ್ಮ ಪಕ್ಷ 150 ಸ್ಥಾನ ಗೆಲ್ಲಬಹುದೇ  ?

ಈ ಬಾರಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ. ನಮಗೆ 150ಕ್ಕೂ ಹೆಚ್ಚು ಸ್ಥಾನಗಳು ದೊರೆಯಲಿವೆ. ನಾವು ತ್ರಿವಳಿ ತಲಾಖ್ ವಿರುದ್ಧ ಹೋರಾಟ ನಡೆಸಿದ್ದರಿಂದ ಮುಸ್ಲಿಂ ಮಹಿಳೆಯರ ಮತಗಳು ನಮಗೆ ದೊರೆಯಬಹುದೆನ್ನುವ ವಿಶ್ವಾಸ ನಮಗಿದೆ. ಕಾಂಗ್ರೆಸ್ ಇಲ್ಲಿ ಸಂಪೂರ್ಣವಾಗಿ ಅಸಂಘಟಿತವಾಗಿದೆ. ಇತ್ತೀಚೆಗೆ ಪಕ್ಷ ಸೇರಿದ 13 ಕಾಂಗ್ರೆಸ್ ಶಾಸಕರಿಂದಾಗಿ ನಮ್ಮ ಬಲ ಮತ್ತಷ್ಟು ಹೆಚ್ಚಾಗಿದೆ.