ಮಂಗಳೂರಿನಲ್ಲಿ ಗುಂಡಿಗೆ ಬಿದ್ದು ಮೃತಪಟ್ಟ ವ್ಯಕ್ತಿ ಶವ ಸಂಸ್ಕಾರ

ಅಣಕು ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಕದ್ರಿ ಕೆ ಎಫ್ ಸಿ ಮುಂಭಾಗದಲ್ಲಿ ಕಾಮಗಾರಿಗಾಗಿ ಅಗೆದ ರಸ್ತೆಯನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇನ್ನೂ ದುರಸ್ತಿ ಪಡಿಸದೇ ಹಾಗೇ ಬಿಟ್ಟಿದ್ದು, ಮಂಗಳವಾರದಂದು ಈ ಗುಂಡಿಗೆ ಬಿದ್ದು ಮೃತಪಟ್ಟ ವ್ಯಕ್ತಿಯ ಶವವನ್ನು ಎಂಸಿಸಿ ಸಿವಿಕ್ ವಾಟ್ಸಪ್ ಗ್ರೂಪ್ ಸದಸ್ಯರೇ ಅಂತಿಮ ಸಂಸ್ಕಾರ ನಡೆಸಿದರು ! ಹೀಗೊಂದು ವಿಭಿನ್ನ ಪ್ರತಿಭಟನೆ ಶವದ ಅಣಕು ಪ್ರದರ್ಶನ ನಡೆಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ.

ರಸ್ತೆ ದುರಸ್ತಿಪಡಿಸದ ಮಂಗಳೂರು ನಗರ ಪಾಲಿಕೆ ಮೃತಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಾಂಕೇತಿಕವಾಗಿ ಪ್ರತಿಕೃತಿ ರೂಪಿಸಿ ಬಿಳಿಬಟ್ಟೆ, ಹೂಹಾರ ಹಾಕಿ ಪ್ರತಿಭಟನೆ ನಡೆಸಲಾಯಿತು. ಎಂಸಿಸಿ ಸಿವಿಕ್ ಗ್ರೂಪ್ಪಿನ ಜೆರಾಲ್ಡ್ ಟವರ್ ಅವರು ಈ ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಂಡಿದ್ದು, ಮೃತ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ನಡೆಸಿದರು. ಸ್ಥಳೀಯ ರಿಕ್ಷಾ ಚಾಲಕರು ಪ್ರತಿಭಟನೆಗೆ ಸಾಥ್ ನೀಡಿದರು.

ಈ ಸಂದರ್ಭ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಜೆರಾಲ್ಡ್ ಟವರ್, “ಪ್ರತೀ ಬಾರಿ ಪಾಲಿಕೆ ಇಲ್ಲಿನ ರಸ್ತೆಗಳನ್ನು ಅಗೆದ ಮಾಡಿದ ಬಳಿಕ ಅದನ್ನು ಮತ್ತೆ ದುರಸ್ತಿ ಪಡಿಸುತ್ತಿಲ್ಲ. ಬಳಿಕ ಇಂತಹ ಹೊಂಡಗಳಿಗೆ ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಪಾಲಿಕೆಗೆ ಹಲವು ಬಾರಿ ದೂರು ನೀಡಿ ಸಾಕಾಗಿದೆ. ಹೀಗಾಗಿ ಗುಂಡಿಗೆ ಬಿದ್ದು ಮೃತಪಟ್ಟ ವ್ಯಕ್ತಿಯ ಅಣಕು ಅಂತಿಮ ಸಂಸ್ಕಾರವನ್ನು ನಡೆಸಿದ್ದೇವೆ. ಇನ್ನಾದರೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಪ್ರತಿಕ್ರಿಯಿಸಲಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕದ್ರಿ ಜಂಕ್ಷನ್ ಆಸುಪಾಸಿನಲ್ಲಿನ ಬಹುತೇಕ ರಸ್ತೆಗಳು ಹೊಂಡಗುಂಡಿಗಳಿಂದಲೇ ತುಂಬಿ ಹೋಗಿದ್ದು, ಇವುಗಳನ್ನು ಶೀಘ್ರವೇ ದುರಸ್ತಿ ಪಡಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಈಗಾಗಲೇ ಇಲ್ಲಿನ ಹೊಂಡಗುಂಡಿಗಳಿಗೆ ಬಿದ್ದು ದ್ವಿಚಕ್ರ ವಾಹನ ಸವಾರರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.