ಮೊಬೈಲ್ ವಾಯುಮಾಲಿನ್ಯ ತಪಾಸಣಾ ಘಟಕಕ್ಕೆ ಚಾಲನೆ ಜನವರಿ 6ಕ್ಕೆ ಚಾಲನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ವಿಭಾಗ ಮತ್ತು  ಪ್ರಾದೇಶಿಕ ಸಾರಿಗೆ ಕಚೇರಿ ಜಂಟಿಯಾಗಿ ಮೊಬೈಲ್ ವಾಹನ ವಾಯುಮಾಲಿನ್ಯ ತಪಾಸಣಾ ಘಟಕವನ್ನು ಕಾರ್ಯಾರಂಭಿಸಲು ನಿರ್ಧರಿಸಿದ್ದು, ಜನವರಿ 6ರಂದು ಚಾಲನೆ ನೀಡಲಿದೆ. ವಾಹನ ದಟ್ಟಣೆ ಹೆಚ್ಚಾದಂತೆ ವಾಹನಗಳಿಂದ ಹೊರಬರುವ ಹೊಗೆಯಿಂದ ವಾಯುಮಾಲಿನ್ಯ ಸಮಸ್ಯೆಗಳೂ ಹೆಚ್ಚಾಗಿರುವುದೇ ಈ ನಿರ್ಧಾರಕ್ಕೆ ಮುಖ್ಯ ಕಾರಣ.

ಮಾರುತಿ ಸುಝುಕಿ ಇಕೋ ವ್ಯಾನಿನ ಒಳಭಾಗವನ್ನು ಈ ಉದ್ದೇಶಕ್ಕಾಗಿ ಸುಮಾರು 9.5 ಲಕ್ಷ ರೂ ವೆಚ್ಚದಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವ್ಯಾನನ್ನು ನಗರದ ವಿವಿಧ ಭಾಗಗಳನ್ನು ನಿಯೋಜಿಸಿ ವಾಹನಗಳನ್ನು ತಪಾಸಣೆಗೊಳಪಡಿಸಲಾಗುವುದು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ ಎರಡೂ ಸಂಸ್ಥೆಗಳ ಸಿಬ್ಬಂದಿ ಕಾರ್ಯಾಚರಣೆಯಲ್ಲಿರುತ್ತಾರೆ.

ಮೊಬೈಲ್ ವಾಯು ಮಾಲಿನ್ಯ ತಪಾಸಣಾ ಘಟಕವನ್ನು ಈ ಹಿಂದೆ 2001ರಲ್ಲಿ ಜಾರಿಗೊಳಿಸಲಾಗಿತ್ತು ಮತ್ತು ಸುಮಾರು ಐದು ವರ್ಷಗಳ ಕಾಲ ಇದು ಕಾರ್ಯಾಚರಿಸಿತ್ತು. ಆದರೆ ನಂತರ ಇದು ಕೆಲವೊಂದು ಕಾರಣಾಂತರಗಳಿಂದ ಸೇವೆಯನ್ನು ನಿಲ್ಲಿಸಿತ್ತು. 2006ರಲ್ಲಿ ಆರ್ಟಿಒ ಕಚೇರಿಯ ಸಿಬ್ಬಂದಿ ಕೊರತೆಯಿಂದ ಕಾರ್ಯಾಚರಣೆ ಸಂಪೂರ್ಣವಾಗಿ ಅಂತ್ಯ ಕಂಡಿತ್ತು.

ವಾಯು ಮಾಲಿನ್ಯ ತಪಾಸಣಾ ನಿಯಮದ ಪ್ರಕಾರ ಪ್ರತಿ 6 ತಿಂಗಳಿಗೊಂದು ಬಾರಿ ವಾಹನಗಳನ್ನು ವಾಯು ಮಾಲಿನ್ಯ ತಪಾಸಣೆಗೊಳಪಡಿಸಬೇಕು. ಒಂದು ವೇಳೆ ಇದಕ್ಕೆ ತಪ್ಪಿದಲ್ಲಿ ಇದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಮತ್ತು ತಪ್ಪಿತಸ್ಥರಿಗೆ ಕನಿಷ್ಟ ರೂ 1,000 ದಂಡ ವಿಧಿಸಲಾಗುತ್ತದೆ. ಹೊಸ ವಾಹನಗಳನ್ನು ಹೊರತುಪಡಿಸಿ ವಾಹನಗಳಿಗೆ ವಾಯು ಮಾಲಿನ್ಯ ತಪಾಸಣೆ ಅವಶ್ಯಕ. ನಗರದಲ್ಲಿ ಆರ್ಟಿಒ ಅಂಗೀಕೃತ ಸುಮಾರು 23 ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಆರ್ಟಿಒ ಅಧಿಕಾರಿ ರಮೇಶ್ ವೆರ್ಣೇಕರ್ ಹೇಳಿದ್ದಾರೆ.