ಕಿಸೆಯಲ್ಲೇ ಮೊಬೈಲ್ ಬ್ಲ್ಯಾಸ್ಟ್

ನಮ್ಮ ಪ್ರತಿನಿಧಿ ವರದಿ

ಉಡುಪಿ : ಇಂದ್ರಾಳಿ ರೈಲ್ವೇ ಸ್ಟೇಷನ್ ರೋಡಿನಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ಕಟಪಾಡಿಯ ಮಂಜುನಾಥ್ ಎಂಬವರ ಮೊಬೈಲ್ ಏಕಾಏಕಿ ಸ್ಫೋಟಗೊಂಡಿದ್ದು, ಕೂಡಲೇ ಅದನ್ನು ಜೇಬಿನಿಂದ ಹೊರಕ್ಕೆ ತೆಗೆದು ರಸ್ತೆಗೆ ಎಸೆದಿದ್ದಾರೆ.

ಮೈಕ್ರೋಮ್ಯಾಕ್ಸ್ ಕಂಪನಿಯ ಮೊಬೈಲ್ ಕಿಸೆಯಲ್ಲೇ ಬ್ಲ್ಯಾಸ್ಟ್ ಆಗಿದೆ. ಬ್ಯಾಟರಿ ಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ಮಂಜುನಾಥ್ ಪತ್ನಿ ಜೊತೆ ರೈಲು ನಿಲ್ದಾಣಕ್ಕೆ ಟಿಕೆಟ್ ಬುಕ್ ಮಾಡಲು ಕಟಪಾಡಿಯಿಂದ ಉಡುಪಿಗೆ ಬಂದಿದ್ದರು.

ಬೈಕಿನಲ್ಲಿ ತೆರಳುತ್ತಿದ್ದಾಗ ಕಿಸೆ ಬಿಸಿಯಾದ ಅನುಭವವಾಗಿದ್ದು, ಕಿಸೆಯಿಂದ ಕೂಡಲೇ ಮೊಬೈಲ್ ತೆಗೆದು ಎಸೆದಿದ್ದಾರೆ. ಉಡುಪಿಯ ಶೋರೂಂನಲ್ಲಿ ಖರೀದಿ ಮಾಡಿದ್ದ ಮೊಬೈಲಲ್ಲಿ ಈವರೆಗೆ ಯಾವುದೇ ತೊಂದರೆ ಕಾಣಿಸಿಕೊಂಡಿರಲಿಲ್ಲ.

ಮೊಬೈಲ್ ಕೈಯಲ್ಲಿ ಹಿಡಿದಾಗ ಕೆಂಡ ಹಿಡಿದ ಹಾಗಾಗಿತ್ತು. ಕೂಡಲೇ ತೆಗೆದು ಬಿಸಾಡಿದೆ ಎಂದು ಮಂಜುನಾಥ್ ಹೇಳಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ 10 ಸಾವಿರ ರೂ ಕೊಟ್ಟು ಮೊಬೈಲನ್ನು ಖರೀದಿಸಿದ್ದರು. ವಾರೆಂಟಿ ಮುಗಿಯುವ ಮೊದಲೇ ಬ್ಲ್ಯಾಸ್ಟ್ ಆಗಿದ್ದು, ಮಂಜುನಾಥಗೆ ಬೇಸರ ಮೂಡಿಸಿದೆ.