ಎಂಡೋ ಸಂತ್ರಸ್ತರ ಆರೈಕೆಗೆ ಮಾ 1ರಿಂದ ಮೊಬೈಲ್ ಕೇರ್

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋ ಸಂತ್ರಸ್ತರ ಆರೈಕೆ ಮಾಡುವ ನಿಟ್ಟಿನಲ್ಲಿ ಮಾ 1ರಿಂದ ಮೊಬೈಲ್ ಟ್ರೀಟ್ಮೆಂಟ್ ಯೂನಿಟ್ಟು(ಮೊಬೈಲ್ ಸೇವಾ ಕೇಂದ್ರ)ಗಳು ಆರಂಭಗೊಳ್ಳಲಿವೆ. ಎಂಡೋಪೀಡಿತರ ಆರೈಕೆಗೆ ಮೊಬೈಲ್ ಸೇವಾ ಕೇಂದ್ರಗಳ ಅಗತ್ಯವಿದೆ ಎನ್ನುವ ಬೇಡಿಕೆ ಕೇಳಿ ಬಂದಿತ್ತು. ಇದೀಗ ಸರಕಾರಿ ಆಸ್ಪತ್ರೆಗಳಲ್ಲಿ ತೆರೆಯಲಾಗುವ ಈ ಐದು ಮೊಬೈಲ್ ಸೇವಾ ಕೇಂದ್ರಗಳಲ್ಲಿ ಫಿಸಿಯೋಥೆರಪಿಗಳ ಸೇವೆ ಕೂಡಾ ಲಭ್ಯವಾಗಲಿದೆ.

ಎಂಡೋಪೀಡಿತರಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರ ಈಗಾಗಲೇ ಹಲವಾರು ಭರವಸೆಗಳನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ವಿಶೇಷ ಸೌಕರ್ಯಗಳನ್ನು ಒದಗಿಸಲು ಸರಕಾರ ಕ್ರಮ ಕೈಗೊಂಡಿದೆ. ಅಲ್ಲದೆ ಇವರ ಆರೈಕೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಕರ್ನಾಟಕ ಹೈಕೋರ್ಟಿಗೂ ಮನವರಿಕೆ ಮಾಡಿತ್ತು.

“ಎಂಡೋಪೀಡಿತರಾಗಿ ಹಾಸಿಗೆ ಹಿಡಿದಿರುವ ಸುಮಾರು 193 ಮಂದಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಇದೀಗ ತೆರೆಯಲಾಗುತ್ತಿರುವ ಮೊಬೈಲ್ ಟ್ರೀಟ್ಮೆಂಟ್ ಯೂನಿಟ್ಟುಗಳಿಗೆ ಸುಮಾರು 50 ಲಕ್ಷ ರೂ.ಗಳನ್ನು ರಾಜ್ಯ ಸರಕಾರ ಖರ್ಚು ಮಾಡುತ್ತಿದೆ. ಈ ಎಲ್ಲಾ ಕೇಂದ್ರಗಳು ಕಳೆದ ವರ್ಷವೇ ಕಾರ್ಯಾರಂಭ ಮಾಡಿವೆ. ಬೆಳ್ತಂಗಡಿ, ಪುತ್ತೂರು, ಬೆಳ್ಳಾರೆ ಮತ್ತು ಮೂಡುಬಿದಿರೆ ಪ್ರದೇಶದ ಎಂಡೋಪೀಡಿತರನ್ನು ಕೇಂದ್ರೀಕರಿಸಿಕೊಂಡು ಈ ಮೊಬೈಲ್ ಸೆಂಟರುಗಳು ಕಾರ್ಯನಿರ್ವಹಿಸಲಿವೆ. ಪ್ರತೀ ಮೊಬೈಲ್ ಸೇವಾ ಕೇಂದ್ರದಲ್ಲಿ ಫಿಸಿಯೋಥೆರಪಿಸ್ಟ್, ಒಬ್ಬ ನರ್ಸ್ ಹಾಗೂ ಆರೋಗ್ಯ ಸಹಾಯಕಿಯೊಬ್ಬರು ಇರುತ್ತಾರೆ” ಎಂದು ಎಂಡೋಸಲ್ಫಾನ್ ಬಾಧಿತರ ಸೇವಾ ಕೇಂದ್ರದ ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅರುಣಕುಮಾರ್ ಎಸ್ ಬಿ ಹೇಳಿದ್ದಾರೆ.

ಹಾಸಿಗೆ ಹಿಡಿದಿರುವ 193 ಮಂದಿ ಸಂತ್ರಸ್ತರ ಆರೋಗ್ಯ ತಪಾಸಣೆಯನ್ನು ಪ್ರತೀ ತಿಂಗಳಲ್ಲಿ ಒಂದು ಬಾರಿಯಂತೆ ಮಾಡುವುದು ಈ ಮೊಬೈಲ್ ಕೇಂದ್ರಗಳ ಕೆಲಸವಾಗಿದೆ. ಈ ತಪಾಸಣೆ ಅಲ್ಲದೆ ಪ್ರತೀ ರೋಗಿಯೂ ವ್ಯಾಯಾಮಗಳನ್ನು ಕೂಡಾ ಮಾಡುವ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಈ ತರಬೇತಿಯನ್ನು ಸಂತ್ರಸ್ತರ ಮನೆ ಮಂದಿಗೂ ಕಲಿಸಿಕೊಡಲಾಗುತ್ತದೆ. ಪ್ರತೀ ತಿಂಗಳೂ ರಾಜ್ಯ ಸರಕಾರ ಈ ಯೋಜನೆಗೆ 3.5 ಲಕ್ಷ ರೂ.ಗಳನ್ನು ನಾಲ್ಕು ಯೂನಿಟ್ಟುಗಳಿಗೆ ಬಿಡುಗಡೆ ಮಾಡಲಿದೆ.

ಬೆಳ್ತಂಗಡಿ, ಸುಳ್ಯ ಮತ್ತು ಪುತ್ತೂರಿನ ತಾಲೂಕು ಆಸ್ಪತ್ರೆಗಳು, ವಿಟ್ಲ, ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಫಿಸಿಯೋಥೆರಪಿ ಕೇಂದ್ರಗಳು ಕಾರ್ಯಾರಂಭಿಸಲಿವೆ. ಪ್ರತೀ ಸೆಂಟರಿನಲ್ಲಿ 4 ಲಕ್ಷ ರೂ ಮೌಲ್ಯದ ಪರಿಕರಗಳಿವೆ.