ಮೆಟ್ರೋದಲ್ಲಿ ಸಿಗಲಿವೆ ಸಂಚಾರಿ ಪುಸ್ತಕಗಳು

ದೆಹಲಿಗೆ ಹೋದರೆ ಮೆಟ್ರೋ ಪ್ರಯಾಣದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಮೆಟ್ರೋದಲ್ಲಿ ಪ್ರಯಾಣಿಸಿದರೆ ಸಾಮಾನ್ಯವಾಗಿ ಬಹುತೇಕರು ತಮ್ಮ ಸ್ಮಾರ್ಟ್ ಫೋನುಗಳಲ್ಲಿ ಮುಳುಗಿರುವುದನ್ನು ನೋಡಿರಬಹುದು. ಈಗ ದೆಹಲಿ ಮೂಲದ ದಂಪತಿ ಶ್ರುತಿ ಶರ್ಮಾ ಮತ್ತು ತರುಣ್ ಚೌಹಾನ್ ಈ ಟ್ರೆಂಡ್ ಬದಲಿಸುವ ಪ್ರಯತ್ನದಲ್ಲಿದ್ದಾರೆ. ಇದೇ ಕಾರಣಕ್ಕೆ ಅವರು `ದೆಹಲಿ ಮೆಟ್ರೋದಲ್ಲಿ ಪುಸ್ತಕಗಳು’ ಎನ್ನುವ ಯೋಜನೆ ಹಾಕಿಕೊಂಡಿದ್ದಾರೆ.

ಇದು ಲಾಭವಿಲ್ಲದ ಯೋಜನೆ. ಆದರೆ ಜನರ ನಡುವೆ ಪುಸ್ತಕ ಓದುವ ಹವ್ಯಾಸ ಬೆಳೆಸುವ ಸಣ್ಣ ಪ್ರಯತ್ನ ಅವರದು. ಶರ್ಮಾ ಮತ್ತು ಚೌಹಾನ್ ವೃತ್ತಿಯಲ್ಲಿ ಕಂಟೆಂಟ್ ಡೆವಲಪರ್ ಹಾಗೂ ಸಿವಿಲ್ ಇಂಜಿನಿಯರ್ ಆಗಿದ್ದರೂ, ಪುಸ್ತಕ ಪ್ರೇಮಿಗಳು. ಮೆಟ್ರೋದಲ್ಲಿ ಪ್ರಯಾಣಿಸುವಾಗ ಅವರು ಪುಸ್ತಕಗಳನ್ನು ಸೀಟಿನ ಮೇಲೆ ಬಿಟ್ಟು ಹೋಗುತ್ತಾರೆ. ಆ ಪುಸ್ತಕದಲ್ಲಿ, “ಇದನ್ನು ತೆಗೆದುಕೊಂಡು ಓದಿ. ಇನ್ನೊಬ್ಬರು ಈ ಪುಸ್ತಕದ ಸಾರವನ್ನು ಆನಂದಿಸಲು ಮತ್ತೆ ಇಲ್ಲೇ ತಲುಪಿಸಿ” ಎಂದು ಒಂದು ವಾಕ್ಯವನ್ನೂ ಅದರಲ್ಲಿ ಬರೆಯಲಾಗಿದೆ.

ದಂಪತಿಗೆ ಈ ಕೆಲಸಕ್ಕೆ ಪ್ರೇರಣೆಯಾಗಿರುವುದು ವಿಶ್ವಸಂಸ್ಥೆಯ ಗೌರವ ರಾಯಭಾರಿ ಎಮ್ಮಾ ವಾಟ್ಸನ್. ಅವರು ಲಂಡನ್ ರೈಲುಗಳಲ್ಲಿ ಹೀಗೆ ಪುಸ್ತಕಗಳನ್ನು ಬಿಟ್ಟು ಹೋಗಿರುವ ಸುದ್ದಿ ಓದಿ ದಂಪತಿ ಪ್ರೇರಣೆ ಪಡೆದಿದ್ದಾರೆ. ಶರ್ಮಾ `ಬುಕ್ಸ್ ಆನ್ ದ ಮೂವ್ ಗ್ಲೋಬಲ್’ ಸಂಪರ್ಕಿಸಿ ಹೀಗೆ ದೆಹಲಿಯಲ್ಲಿ ಪುಸ್ತಕ ಬಿಟ್ಟು ಹೋಗಲು ಪರವಾನಗಿ ಪಡೆದಿದ್ದಾರೆ.

ಶರ್ಮಾ ಮೇಯಲ್ಲಿ ಮೂರು ಪುಸ್ತಕಗಳನ್ನು ಮೆಟ್ರೋದಲ್ಲಿ ಬಿಟ್ಟಿದ್ದರು. ಆದರೆ ಅವುಗಳಲ್ಲಿ ಒಂದನ್ನು ಮಾತ್ರ ಓದಲಾಗಿದ್ದು, ಉಳಿದ ಎರಡು ಕಳೆದು ಹೋಗಿವೆ. “ಪುಸ್ತಕ ಕಂಡ ಕೂಡಲೇ `ಬುಕ್ಸ್ ಆನ್ ದ ಡೆಲ್ಲಿ ಮೆಟ್ರೋ’ ಎಂದು ಬರೆದು ಸಾಮಾಜಿಕ ತಾಣದಲ್ಲಿ ಟ್ಯಾಗ್ ಮಾಡಿ ಪೋಸ್ಟ್ ಮಾಡಬೇಕು. ಆಗ ಪುಸ್ತಕ ತೆಗೆದುಕೊಂಡಿರುವುದು ನಮಗೆ ತಿಳಿಯುತ್ತದೆ” ಎನ್ನುತ್ತಾರೆ ಶರ್ಮಾ.