ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ : ಶಾಲಾ ಸಮಯದಲ್ಲಿ ಮೊಬೈಲ್ ಬಳಕೆಗೆ ನಿಷೇಧ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಶಾಲೆಗಳಲ್ಲಿ ತರಗತಿ ನಡೆಯುವ ಸಮಯದಲ್ಲಿ ಮೊಬೈಲ್ ಬಳಕೆಗೆ ಶಿಕ್ಷಣ ಇಲಾಖೆಯು ಕಟ್ಟುನಿಟ್ಟಿನ ನಿಷೇಧ ಹೇರಿದೆ.

ಕೇರಳ ರಾಜ್ಯ ಹೈಯರ್ ಸೆಕೆಂಡರಿ ನಿರ್ದೇಶಕರು ಈ ಆದೇಶ ಹೊರಡಿಸಿದ್ದಾರೆ. ಅದರಂತೆ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೊಬೈಲ್ ಬಳಕೆಗೆ ನಿಯಂತ್ರಣ ಹೇರಲಾಗಿದೆ. ಮೊಬೈಲ್, ಫೇಸ್ಬುಕ್, ವಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೂ ನಿಷೇಧ ಹೇರಲಾಗಿದೆ. ಆದೇಶ ಪಾಲಿಸದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ವಿರುದ್ಧ ಆಯಾ ಶಾಲೆಗಳ ಪ್ರಾಂಶುಪಾಲರು ಶಿಸ್ತು ಕ್ರಮ ಕೈಗೊಳ್ಳುವಂತೆ ಹೈಯರ್ ಸೆಕೆಂಡರಿ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ. ಶಾಲೆಗಳಲ್ಲಿ ಮೊಬೈಲ್, ಫೇಸ್ಬುಕ್, ವಾಟ್ಸಪ್ ಇತ್ಯಾದಿ ಸಾಮಾಜಿಕ ಜಾಲತಾಣಗಳನ್ನು ಬಳಸುವುದು ಕಲಿಕೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ನಿಷೇಧ ಹೇರಬೇಕೆಂದು ರಾಜ್ಯ ಬಾಲ ಹಕ್ಕು ಆಯೋಗವು ನಿರ್ದೇಶನ ನೀಡಿತ್ತು. ಇದರನ್ವಯ ಈ ಹೊಸ ಆದೇಶ ಹೊರಡಿಸಿದೆ.

ಹೆತ್ತವರು ಜಾಗ್ರತರಾಗಿರಬೇಕು

ಫೇಸ್ಬುಕ್, ವಾಟ್ಸಪ್ ಇತ್ಯಾದಿಗಳಲ್ಲಿ ಸಮಾಜಘಾತಕರು, ವಂಚಕರು, ಲೈಂಗಿಕ ದಂಧೆ ನಡೆಸುತ್ತಿರುವವರು, ಉಗ್ರಗಾಮಿಗಳ ಸಂಪರ್ಕ ಬೆಳೆಸಿ ಅದೆಷ್ಟೋ ವಿದ್ಯಾರ್ಥಿಗಳನ್ನು ತಮ್ಮ ಬಲೆಗೆ ಬೀಳಿಸಿ ಜೀವನ ಹಾಳು ಮಾಡಿದ ಉದಾಹರಣೆಗಳಿವೆ. ಭಯೋತ್ಪಾದಕರು ತಮ್ಮ ಉದ್ದೇಶಕ್ಕಾಗಿ ಇದೇ ದಾರಿ ಬಳಸುತ್ತಿದ್ದಾರೆ. ಅವರ ಬಲೆಗೆ ಬಿದ್ದ ವಿದ್ಯಾರ್ಥಿಗಳು, ಯುವಕ-ಯುವತಿಯರು ನಾಪತ್ತೆಯಾದ ಘಟನೆಗಳು ಕಾಸರಗೋಡು ಜಿಲ್ಲೆಯಲ್ಲಿ ಸಾಕಷ್ಟಿವೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು  ಹೆತ್ತವರು ಸದಾ ಜಾಗ್ರತೆ ವಹಿಸಬೇಕು. ಈ ಬಗ್ಗೆ ಪೆÇಲೀಸ್ ಇಲಾಖೆ ಕೂಡ ಎಚ್ಚರಿಕೆ ವಹಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

LEAVE A REPLY