ಮರಳು ಗಣಿಗಾರಿಕೆ ನಿಯಮ ಸಡಿಲಿಕೆಗೆ ಶಾಸಕರ ಒತ್ತಾಯ

ಸಾಧ್ಯವಿಲ್ಲ ಎಂದ ಡೀಸಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸರ್ಕಾರ ಮರಳು ಗಣಿಕಾರಿಕೆ ಮೇಲೆ ಹೇರಿರುವ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಬೇಕು ಎಂದು ಜನಪ್ರತಿನಿಧಿಗಳು  ಒತ್ತಾಯಿಸಿದ್ದಾರೆ.

ನಿಯಮಗಳ ಪ್ರಕಾರ ಕರಾವಳಿ ಮರಳು ನಿರ್ಬಂಧಿತ ವಲಯದಲ್ಲಿ ಯಂತ್ರ ಬಳಸಿ ನಡೆಸುವ ಮರಳುಗಾರಿಕೆಗೆ ಅನುಮತಿಯಿಲ್ಲ. ನದಿ ತೀರಗಳಿಂದ ಮರಳನ್ನು ಯಂತ್ರ ಬಳಸದೆ, ಯಾಂತ್ರಿಕ ಬೋಟು ಬಳಸದೆ ಎತ್ತಬೇಕು ಎಂದು ಸರ್ಕಾರ ನಿಯಮ ಜಾರಿಗೊಳಿಸಿದೆ. ಇದರೊಂದಿಗೆ ಇತರ ರಾಜ್ಯಗಳಿಗೆ ಅಕ್ರಮ ಮರಳು ಸಾಗಾಟ ಮಾಡುವುದನ್ನು ಪತ್ತೆಹಚ್ಚಲು ಸೀಸಿ ಟೀವಿ ಪತ್ತೇಗಾರಿಕೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದೀಗ ಸರ್ಕಾರವು ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ಮರಳು ನಿಯಮವನ್ನು ಜಾರಿಗೊಳಿಸುವಂತೆ ಒತ್ತಾಯಿಸಲಾಗಿದೆ.

ಕೆಡಪಿ ಪರಿಶೀಲನಾ ಸಭೆಯಲ್ಲಿ ಶಾಸಕ ಜೆ ಆರ್ ಲೋಬೋ ಮತ್ತು ವಿಧಾನಪರಿಷತ್ತು ಸದಸ್ಯ ಐವನ್ ಡಿ ಸೋಜ, “ಸ್ಥಳೀಯ ಕಾಮಗಾರಿ ಕೆಲಸಗಳ ಬೇಡಿಕೆ ಹೆಚ್ಚಾಗಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಸಡಿಲಗೊಳಿಸುವುದು ಅತ್ಯವಶ್ಯಕ, ಮರಳಿನ ಕೊರತೆಯಿಂದಾಗಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಹೊಡೆತ ಬಿದ್ದಿದೆ” ಎಂದು ಹೇಳಿದ್ದಾರೆ. “ಪರಿಸರ ಸಚಿವಾಲಯದ ಸುಮಾರು 37 ಶರತ್ತುಗಳೊಂದಿಗೆ 425 ಕಾಂಟ್ರಾಕ್ಟರುಗಳಿಗೆ ಮರಳು ಗಣಿಗಾರಿಕೆಗೆ ಪರವಾನಿಗೆ ನೀಡಲಾಗಿದೆ. ಆದರೆ ಪರವಾನಿಗೆ ಹೊಂದಿರುವವರು ಶರತ್ತುಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಪರಿಸರ ಸಚಿವಾಲಯ ವಿಧಿಸಿರುವ ನಿರ್ಬಂಧಗಳನ್ನು ಸಡಿಲಗೊಳಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಿಲ್ಲ” ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.