ಐಎಎಸ್ ಅಧಿಕಾರಿಗೆ ಅಧಿಕಾರ ವಹಿಸಿಕೊಳ್ಳಲು ಶಾಸಕರ ಅಡ್ಡಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸಚಿವರು, ಶಾಸಕರು, ಜನಪ್ರತಿನಿಧಿಗಳಿಗೆ ಮೊದಲಿಂದಲೂ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಗಳೊಂದಿಗೆ ಸರಿಹೋಗುವುದಿಲ್ಲ.

ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ಕಳೆದ ಶನಿವಾರ ನಿಯುಕ್ತರಾಗಿದ್ದ ಯುವ ಐಎಎಸ್ ಅಧಿಕಾರಿ ಭೂಬಾಲನ್ ಅವರಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡಲಾಗಿಲ್ಲ.

ದಾವಣಗೆರೆಯ ಹರಪನಹಳ್ಳಿ ಉಪವಿಭಾಗದಿಂದ ಅವರನ್ನು ಹುದ್ದೆ ಖಾಲಿ ಇರುವ ಪುತ್ತೂರಿಗೆ ವರ್ಗಾವಣೆ ಮಾಡಲಾಗಿತ್ತು. ಐಎಎಎಸ್ ಮತ್ತು ದಕ್ಷ, ಪ್ರಾಮಾಣಿಕ, ಖಡಕ್ ಅಧಿಕಾರಿಗಳನ್ನು ಬಯಸದ  ಮಂಗಳೂರಿನ ಜನಪ್ರತಿನಿಧಿಗಳು ಅವರು ಅಧಿಕಾರ ವಹಿಸಿಕೊಳ್ಳದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಭಾವ ಬೀರಿ ಅವರ ವರ್ಗಾವಣೆ ರದ್ಧು ಮಾಡಿದ್ದಾರೆ.

ಹಾಗೆ ನೋಡಿದರೆ, ಈಗ ಪ್ರಭಾರ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಮುಜರಾಯಿ ಇಲಾಖೆ ಸಹಾಯಕ ಆಯುಕ್ತರಾದ ಎಂ ಕೆ ಪ್ರಮೀಳಾ ಅವರು ಕೂಡ ಇದೇ ಹುದ್ದೆಯಲ್ಲಿ ಮುಂದುವರಿಯಲು ಇವರಿಬ್ಬರು ಶಾಸಕರು ಸಿದ್ಧರಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರು ಪ್ರಮೀಳಾ ಅವರನ್ನು ಪುತ್ತೂರು ಸಹಾಯಕ ಆಯುಕ್ತರಾಗಿ ನೇಮಿಸಲು ಸಿದ್ದರಿದ್ದರೂ ಈ ಮಂದಿ ಅದಕ್ಕೂ ಅಡ್ಡಗಾಲು ಹಾಕಿದ್ದಾರೆ ಎನ್ನಲಾಗುತ್ತಿದೆ.

ಐಎಎಸ್ ಅಧಿಕಾರಿಯನ್ನು ಓಡಿಸಿದ ಅನಂತರ ಇಲ್ಲಿಗೆ ಹೊಸ ಅಧಿಕಾರಿಯನ್ನು ಸರಕಾರ ನೇಮಿಸಿಲ್ಲ. ಮಾತ್ರವಲ್ಲದೆ, ಭೂಬಾಲನ್ ಅವರಿಗೆ ಹೊಸ ಸ್ಥಳವನ್ನು ಕೂಡ ತೋರಿಸಲಾಗಿಲ್ಲ.

ಇನ್ನೇನು ಒಂದೆರಡು ತಿಂಗಳು ಮಾತ್ರ ಸರಕಾರದ ಕಾರ್ಯಭಾರದ ಇದ್ದಾಗಲೂ ಐಎಎಸ್ ಅಧಿಕಾರಿಗಳು ಬೇಡ ಎನ್ನುವ ಕರಾವಳಿ ಶಾಸಕರ ಮನದಿಂಗಿತ ಏನು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

 

LEAVE A REPLY