ಜನರ ಬೇಡಿಕೆ ಈಡೇರಿಸುವಲ್ಲಿ ಕಾಂಗ್ರೆಸ್ ವಿಫಲ : ಸುನಿಲ್

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ನಾಯಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ವೀರಪ್ಪ ಮೊಯ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ, ಸಂಸದರಾಗಿ, ಕೆಂದ್ರ ಸಚಿವರಾಗಿ ಕಾರ್ಕಳದ ಜನತೆಗೆ ನೀಡಿದ ಕೊಡುಗೆ ಏನೆಂದು ಪ್ರಶ್ನಿಸಿದರು. ಕಳೆದ 2014ರಂದು ಕಾರ್ಕಳ ಪುರಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದು, ಸುಮಾರು 2 ಕೋಟಿ ರೂ ವೆಚ್ಚದ ಈ ಯೋಜನೆ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಇದಲ್ಲದೆ ಮಿಯ್ಯಾರಿನ ಕಂಬಳದ ಗ್ಯಾಲರಿಗೆ 1 ಕೋಟಿ ರೂ ಅನುದಾನ ನೀಡುವುದಾಗಿ ಗುದ್ದಲಿ ಪೂಜೆ ನೆರವೇರಿಸಿ ಕಾರ್ಕಳದ ಜನತೆಗೆ ಆಶ್ವಾಸನೆ, ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆ. ಕಾಂಗ್ರೆಸ್ ನಾಯಕರ ಸುಳ್ಳು ಆಶ್ವಾಸನೆಗಳು ಹಾಗೂ ಮಂಜೂರಾಗದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವುದೇ ಒಂದು ಸಾಧನೆಯಾಗಿದೆ. ಅನುದಾನ ಬಿಡುಗಡೆಯಾಗದ ಕಾಮಗಾರಿಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರಿಂದ ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಒಬ್ಬ ಕೇಂದ್ರ ಸಚಿವರಾಗಿದ್ದು ಹಾಲಿ ಸಂಸದರಾಗಿ ಜವಾಬ್ದಾರಿ ಸ್ಥಾನದಲ್ಲಿರುವ ತಾವು ನೆರವೇರಿಸಿರುವ ಶಿಲಾನ್ಯಾಸದ ಕಾರ್ಯಕ್ರಮ ಕಾಮಗಾರಿಯನ್ನು ಯಾವಾಗ ಪೂರ್ಣಗೊಳಿಸುವಿರೆಂದು 48 ಗಂಟೆಯೊಳಗೆ ಜನರಿಗೆ ಬಹಿರಂಗಪಡಿಸಬೇಕೆಂದು ಮೊಯ್ಲಿಗೆ ಸವಾಲು ಹಾಕಿದರು.

 

LEAVE A REPLY