ಟ್ರಾಫಿಕ್ ಪೊಲೀಸ್ ಜೊತೆ ಅನುಚಿತ ವರ್ತಿಸಿದ ಶಾಸಕ

ಅಂಬುಲೆನ್ಸಿಗೆ ದಾರಿ ಬಿಟ್ಟಿದ್ದಕ್ಕೆ ಸಿಟ್ಟುಗೊಂಡ ಬಾವಾ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸದಾ ಸುದ್ದಿಯಲ್ಲಿರುವ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ ಮೊಯ್ದೀನ್ ಬಾವಾ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಸಂಚಾರ ನಿಯಂತ್ರಿಸಲು ರಸ್ತೆ ಮಧ್ಯೆ ನಿಂತಿದ್ದ ಟ್ರಾಫಿಕ್ ಪೊಲೀಸರನ್ನು ಸಾರ್ವಜನಿಕರ ಎದುರೇ ಅವಾಚ್ಯವಾಗಿ ನಿಂದಿಸುವ ಮೂಲಕ ತನ್ನ ದರ್ಪದ ಪ್ರದರ್ಶನ ಮಾಡಿದ್ದಾರೆ. ಶಾಸಕನಾದ ಮಾತ್ರಕ್ಕೆ ತನಗೆ ಯಾವ ರೂಲ್ಸೂ ಇಲ್ಲವೆಂದು ತಿಳಿದಿರುವ ಶಾಸಕ ಬಾವಾ, ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿದ ಘಟನೆ ನಡೆದಿದೆ.

ಕ್ರಿಸ್ಮಸ್ ಹಬ್ಬ, ಹೊಸ ವರ್ಷಾಚರಣೆ, ಭಾನುವಾರದ ರಜೆ ಹಿನ್ನೆಲೆಯಲ್ಲಿ ನಗರದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ ಶನಿವಾರದಿಂದಲೇ ಕಾಡಲು ಶುರುವಾಗಿತ್ತು. ನಂತೂರು ಸರ್ಕಲ್ ಬಳಿ ಭಾರೀ ಟ್ರಾಫಿಕ್ ಸಮಸ್ಯೆ ಕಾಡಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಉದ್ದಕ್ಕೂ ಸರದಿ ಸಾಲಿನಲ್ಲಿ ವಾಹನ ಜಾಂ ಆಗಿತ್ತು. ನಂತೂರು ಸರ್ಕಲಿನಿಂದ ಉಂಟಾದ ಟ್ರಾಫಿಕ್ ಜಾಮ್ ಅತ್ತ ಕೆಪಿಟಿ ಜಂಕ್ಷನಿನವರೆಗೂ ಇತ್ತ ಪಂಪ್ವೆಲ್ ಕಡೆಗೂ ಮುಟ್ಟಿತ್ತು. ಇದೇ ವೇಳೆ ಮೊಯ್ದೀನ್ ಬಾವಾ ಪಂಪ್ವೆಲ್ ಸರ್ಕಲಿನಿಂದ ಸುರತ್ಕಲ್ ಕಡೆಗೆ ತೆರಳುತ್ತಿದ್ದರೆ, ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಅಂಬುಲೆನ್ಸ್ ನಂತೂರು ಸರ್ಕಲ್ ಬಳಿಯಿಂದ ನಗರ ಆಸ್ಪತ್ರೆಗೆ ಆಗಮಿಸುತ್ತಿತ್ತು.

ನಂತೂರು ಸರ್ಕಲ್ ಬಳಿ ನಿಂತಿದ್ದ ಟ್ರಾಫಿಕ್ ಪೇದೆಯೊಬ್ಬರು ಅಂಬುಲೆನ್ಸಿಗೆ ಮೊದಲು ತೆರಳಲು ಅವಕಾಶ ಮಾಡಿಕೊಟ್ಟಿದ್ದು, ಇತ್ತ ಕಡೆಯಿಂದ ಬಂದ ಶಾಸಕ ಮೊಯ್ದೀನ್ ಬಾವಾ ಕಾರಿಗೆ ತಡೆಯೊಡ್ಡಿದ್ದರು. ತನ್ನ ಕಾರನ್ನು ಟ್ರಾಫಿಕ್ ಪೊಲೀಸ್ ನಿಲ್ಲಿಸಿದ ಎಂಬ ಕಾರಣಕ್ಕೆ ಬಾವಾ ಸಿಟ್ಟುಗೊಂಡರಲ್ಲದೇ ಸಂಚಾರಿ ಪೊಲೀಸರ ವಿರುದ್ಧ ಏಕಾಏಕಿ ಆಕ್ರೋಶಗೊಂಡು, ಟ್ರಾಫಿಕ್ ಪೊಲೀಸನನ್ನು “ಶಾಸಕನ ಕಾರನ್ನು ನಿಲ್ಲಿಸುವಷ್ಟು ಧೈರ್ಯ ಬಂತಾ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಯಿಗೆ ಬಂದಂತೆ ದೊಡ್ಡ ಸ್ವರದಲ್ಲಿ ನಿಂದನಾತ್ಮಕ ಪದಗಳನ್ನು ಬಳಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಟ್ರಾಫಿಕ್ ಪೊಲೀಸ್, ತಾನು ರೋಗಿ ಇದ್ದ ಕಾರಣಕ್ಕೆ ಅಂಬುಲೆನ್ಸಿಗೆ ಮೊದಲು ತೆರಳಲು ಅವಕಾಶ ಮಾಡಿಕೊಟ್ಟೆ ಎಂದು ಹೇಳಿದರೂ ಕೇಳದೇ ಆತನ ವಿರುದ್ಧ ಮೊಯ್ದೀನ್ ಬಾವಾ ಹರಿಹಾಯ್ದಿರುವುದು ಸಾರ್ವಜನಿಕರಿಂದ ಟೀಕೆಗೆ ಒಳಗಾಯಿತು. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಮೊದಲು ಅಂಬುಲೆನ್ಸಿಗೆ ದಾರಿ ಬಿಟ್ಟುಕೊಡಬೇಕಾಗಿತ್ತು. ಆದರೆ ಮೊಯ್ದೀನ್ ಬಾವಾ ಅಮಾಯಕ ಪೊಲೀಸನ ವಿರುದ್ಧ ಕಿಡಿ ಕಾರಿರುವ ವರ್ತನೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.