ಅಡಿಕೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಗೆ ಮಿಶ್ರ ಪ್ರತಿಕ್ರಿಯೆ

ಸಾಂದರ್ಭಿಕ ಚಿತ್ರ

ಶಿವಮೊಗ್ಗ : ಕೇಂದ್ರ ಸರ್ಕಾರವು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿಯಲ್ಲಿ ಅಡಿಕೆಗೆ ಕನಿಷ್ಟ ಬೆಂಬಲ ಬೆಲೆ ನಿಗದಿಗೊಳಿಸಿದ್ದು, ಈ ಯೋಜನೆಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೇಂದ್ರ ಸರ್ಕಾರವು ಡಿಸೆಂಬರ್ 7ರಂದು ಪ್ರಕಟಣೆ ಹೊರಡಿಸಿ 28,000 ಟನ್ನು ಚಾಲಿ ಅಡಿಕೆ ಮತ್ತು 12,000 ಟನ್ನು ಕೆಂಪು ಅಡಿಕೆ ಸೇರಿ ಒಟ್ಟು 40,000 ಟನ್ನು ಅಡಿಕೆಯನ್ನು ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯಡಿಯಲ್ಲಿ ಖರೀದಿಸಬಹುದು ಎಂದು ಘೋಷಿಸಿದ್ದು, ಕೇಂದ್ರ ಸರ್ಕಾರವು ಚಾಲಿ ಅಡಿಕೆ ಕ್ವಿಂಟಾಲೊಂದಕ್ಕೆ ರೂ 25,100 ಮತ್ತು ಕೆಂಪು ಅಡಿಕೆಗೆ ರೂ 27,000 ಕನಿಷ್ಟ ಬೆಂಬಲ ಬೆಲೆ ನಿಗದಿಗೊಳಿಸಿದೆ.

ಕ್ಯಾಂಪ್ಕೋ, ಮಲ್ನಾಡು ಅಡಿಕೆ ಮಾರುಕಟ್ಟೆ ಸಹಕಾರಿ ಸಂಘ ಸೇರಿದಂತೆ ಐದು ಸಹಕಾರಿ ಸಂಘಗಳಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆ ಡಿಸೆಂಬರ್ 31ರವರೆಗೆ ಅಸ್ತಿತ್ವದಲ್ಲಿರಲಿದೆ.

ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಡಿಕೆ ಮಾರುಕಟ್ಟೆಯಲ್ಲಿ  ಸಕಾರಾತ್ಮಕ ಪ್ರಭಾವ ಬೀರಲಿದೆ ಎಂದು ಮಾಜಿ ಶಾಸಕ ಮತ್ತು ಅಡಿಕೆ ಬೆಳೆಗಾರರ ಸೆಲ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅರಗ ಜ್ಞಾನೇಂದ್ರ ಹೇಳಿದ್ದಾರೆ.

“ಕೇಂದ್ರ ಸರ್ಕಾರದ ಯೋಜನೆ ಉತ್ಪಾದನಾ ಬೆಲೆಯ  ಮೇಲೆ ಅಷ್ಟೊಂದು ಉತ್ತಮವಾದ ಪ್ರಭಾವ ಬೀರಲಾರದು. ಮಾರುಕಟ್ಟೆ ಮಧ್ಯಪ್ರವೇಶ ದರವು ಮಾರುಕಟ್ಟೆ ದರಕ್ಕಿಂತ ಹೆಚ್ಚಿದ್ದರೆ ಇದರಿಂದ ಸಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆಗಳಿದ್ದವು. ಆದರೆ ಕೇಂದ್ರ ಸರ್ಕಾರ ನಿಗದಿಗೊಳಿದಿದ ದರ ಮತ್ತು ಮಾರುಕಟ್ಟೆ ದರದ ನಡುವೆ ದೊಡ್ಡ ಮಟ್ಟದ ವ್ಯತ್ಯಾಸಗಳಿಲ್ಲ” ಎಂದು ಶಿವಮೊಗ್ಗ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ ಎ ರಮೇಶ್ ಹೇಳಿದ್ದಾರೆ.