ಮಿಥುನ್ ಮತ್ತೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಜಿಲ್ಲೆಯಲ್ಲಿ ಬಹಳಷ್ಟು ಕುತೂಹಲಸೃಷ್ಟಿಸಿದ್ದ ಜಿಲ್ಲಾ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಿಥುನ್ ರೈ ಆಯ್ಕೆಗೊಂಡಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಳ್ಳುತ್ತಿರುವ ಮಿಥುನ್ ರೈ ವಿರುದ್ಧ ಈ ವರ್ಷ ಲುಕ್ಮಾನ್ ಅವರು ಪ್ರಬಲ ಸ್ಪರ್ಧೆಯೊಡ್ಡಿ ಕಣಕ್ಕೆ ಇಳಿದಿದ್ದರು. ಆದರೆ ಅವರ ಎಲ್ಲಾ ನಿರೀಕ್ಷೆಗಳನ್ನು ಹುಸಿ ಮಾಡಿ ಮಿಥುನ್ ರೈ ಮತ್ತೊಮ್ಮೆ ಜಿಲ್ಲಾಧ್ಯಕ್ಷರಾಗಿದ್ದಾರೆ.  ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಮತಎಣಿಕೆ ನಡೆಸಲಾಯಿತು.

ವಿಜಯ ಪತಾಕೆ ಹಾರಿಸಿದ ಮಿಥುನ್ ರೈ ತೆರೆದ ವಾಹನದಲ್ಲಿ ಮಲ್ಲಿಕಟ್ಟೆಯಿಂದ ಕದ್ರಿ ಸರ್ಕ್ಯೂಟ್ ಹೌಸ್ ತನಕ ಮೆರವಣಿಗೆ ನಡೆಸಿದರು. ಇನ್ನೊಂದೆಡೆ ಲುಕ್ಮಾನ್ ಬೆಂಬಲಿಗರ ಇನ್ನೊಂದು ಬದಿಯಲ್ಲಿ ಜಮಾಯಿಸಿದ್ದರಿಂದ ಒಂದೊಮ್ಮೆ ಬಿಗುವಿನ ವಾತಾವರಣವೂ ಸೃಷ್ಟಿಯಾಗಿತ್ತು. ಇದರಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಪೆÇಲೀಸ್ ಭದ್ರತೆ ಒದಗಿಸಲಾಗಿತ್ತು.

ಇನ್ನುಳಿದಂತೆ ಜಿಲ್ಲಾ ವಿಧಾನಸಭಾ ಕ್ಷೇತ್ರವಾರು ಪ್ರಕಾರ ಸುಳ್ಯಕ್ಕೆ ಸಿದ್ಧೀಕ್, ಪುತ್ತೂರಿಗೆ ಯು ಟಿ ತೌಸೀಫ್, ಬೆಳ್ತಂಗಡಿಗೆ ಅಭಿನಂದನ್ ಹರೀಶ್ ಕುಮಾರ್, ಮೂಡಬಿದ್ರೆಗೆ ಚಂದ್ರಹಾಸ್, ಮಂಗಳೂರು ಉತ್ತರ ಕ್ಷೇತ್ರಕ್ಕೆ ಗಿರೀಶ್ ಆಳ್ವ, ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಪ್ರಶಾಂತ್ ಮುನ್ನಾ, ಮಂಗಳೂರು ದಕ್ಷಿಣಕ್ಕೆ ಮೆರಿಲ್ ರೇಗೋ ಮತ್ತು ಮಂಗಳೂರು ಉಳ್ಳಾಲಕ್ಕೆ ಅಬ್ದುಲ್ ರವೂಫ್ ಆಯ್ಕೆಯಾಗಿದ್ದಾರೆ.

ರಸ್ತೆ ಬ್ಲಾಕ್ : ಆಕ್ರೋಶ

ಜನನಿಬಿಡ ಪ್ರದೇಶವಾಗಿರುವ ಕದ್ರಿ ಮಲ್ಲಿಕಟ್ಟೆಯ ಪ್ರಮುಖ ರಸ್ತೆ ಪಕ್ಕದಲ್ಲೇ ಇರುವ ಕಾಂಗ್ರೆಸ್ ಕಚೇರಿಯಲ್ಲಿ ಮತಎಣಿಕೆ ಇಟ್ಟ ಕಾರಣ ಇಲ್ಲಿ ಬಿಗುಭದ್ರತೆ ಏರ್ಪಡಿಸಲಾಗಿತ್ತು. ಈ ರಸ್ತೆಯಲ್ಲಿ ಬ್ಯಾರಿಕೇಡ್ ಇಟ್ಟು ಏಕಮುಖ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ಈ ರಸ್ತೆ ಮೂಲಕ ಸಾಗುವ ವಾಹನಗಳು ಎಲ್ಲೆಲ್ಲೋ ಚಲಿಸುವಂತಾಗಿ ಪ್ರಯಾಣಿಕರು ಸಂಕಷ್ಟಕ್ಕೀಡಾಗಬೇಕಾಯಿತು. ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ಈ ಚುನಾವಣೆಯನ್ನು ನಡೆಸಿ ಜನರಿಗೆ ತೊಂದರೆ ಕೊಟ್ಟು ಸಾವಿರಾರು ಜನರನ್ನು ಕೂಡಿ ಹಾಕಿ ಉದ್ವಿಗ್ನ ಸ್ಥಿತಿಯಲ್ಲಿ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ತೋಡಿಕೊಳ್ಳುತ್ತಿರುವುದು ಕಂಡುಬಂತು. ರಸ್ತೆ ಪೂರ್ತಿ ಬ್ಲಾಕ್ ಮಾಡಲಾಗಿತ್ತು.